ಹತಾಶೆ.. ಹಸಿವು.. ಛಲ.. ಶಿಸ್ತು ಮತ್ತು ಟೆಸ್ಟ್ ಶತಕ.. ಇದು ಮಯಾಂಕ್ ಅಗರ್ವಾಲ್ ಸಾಹಸಗಾಥೆ

0

ಬೆಂಗಳೂರು, ಅಕ್ಟೋಬರ್ 3: 2016-17ನೇ ಸಾಲಿನ ರಣಜಿ ಟ್ರೋಫಿ ಟೂರ್ನಿ. ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಯುವಕ ಇವತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದಾನೆ. ಮೂರು ವರ್ಷಗಳ ಹಿಂದೆ ರಾಜ್ಯ ತಂಡದಲ್ಲೇ ಜಾಗ ಇಲ್ಲದ ಆಟಗಾರನಿಂದು ಭಾರತ ತಂಡದ ಪರ ಅಬ್ಬರಿಸುತ್ತಿದ್ದಾರೆ. ಇದು ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಸಾಹಸಗಾಥೆಯ ರೋಚಕ ಕಥೆ.

ಮಯಾಂಕ್ ಅಗರ್ವಾಲ್. ಒಂದು ಕಾಲದಲ್ಲಿ ಕ್ರೀಸ್ಗಿಳಿದರೆ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಬಡಿದಟ್ಟುತ್ತಿದ್ದ ಹುಡುಗ ಇವತ್ತು ತಾಳ್ಮೆಯ ಸಾಕಾರಮೂರ್ತಿ. ಟೆಸ್ಟ್ ಕ್ರಿಕೆಟ್ಗೆ ಲಾಯಕ್ಕಲ್ಲ ಎಂದು ಟೀಕಿಸಿದವರ ಬಾಯಲ್ಲೇ ಶಹಬ್ಬಾಷ್ ಅನ್ನಿಸಿಕೊಂಡ ಛಲದಂಕಮಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ 2ನೇ ದಿನ ಮಯಾಂಕ್ ಅಗರ್ವಾಲ್ ಚೊಚ್ಚಲ ಶತಕ ಬಾರಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಆಡಿದ 5ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಮಯಾಂಕ್ 204 ಎಸೆತಗಳಲ್ಲಿ 100ರ ಗಡಿ ದಾಟಿದಾಗ ಆಕಾಶದತ್ತ ಮುಖ ಮಾಡಿ ದೊಡ್ಡ ನಿಟ್ಟುಸಿರು ಬಿಟ್ಟರು. ಇದು ಮಯಾಂಕ್ ಅಗರ್ವಾಲ್ ಅವರ ಮೂರು ವರ್ಷಗಳ ಹಸಿವು, ಛಲ, ಶಿಸ್ತು, ದೃಢ ಸಂಕಲ್ಪಕ್ಕೆ ಸಿಕ್ಕ ಪ್ರತಿಫಲ ಅಂದರೂ ತಪ್ಪಲ್ಲ.

PC: BCCI

2016-17ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಿದಾಗ ಆ ತಂಡದಲ್ಲಿ ಮಯಾಂಕ್ ಅಗರ್ವಾಲ್ಗೆ ಸ್ಥಾನ ಸಿಕ್ಕಿರಲಿಲ್ಲ. ಅದಕ್ಕೂ ಹಿಂದಿನ ಟೂರ್ನಿಗಳಲ್ಲಿ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ್ದೇ ಇದಕ್ಕೆ ಕಾರಣವಾಗಿತ್ತು. ಹಾಗಂತ ಮಯಾಂಕ್ ಅದರಿಂದ ಧೃತಿಗೆಡಲಿಲ್ಲ. ಸೋತ ಜಾಗದಲ್ಲಿ ಪುಟಿದೆದ್ದು ನಿಲ್ಲುವ ದೃಢ ಸಂಕಲ್ಪ ಮಾಡಿ ಕಠಿಣ ಅಭ್ಯಾಸಕ್ಕೆ ಇಳಿದೇ ಬಿಟ್ಟರು. ಈ ಸಂದರ್ಭದಲ್ಲಿ ಮಯಾಂಕ್ ಅಗರ್ವಾಲ್ ಅವರ ಪ್ರತಿ ಹೆಜ್ಜೆಯ ಹಿಂದೆ ನಿಂತು ಬೆನ್ನು ತಟ್ಟಿ ಪ್ರೋತ್ಸಾಹಿಸಿದವರೇ ಕೋಚ್ ಆರ್.ಎಕ್ಸ್ ಮುರಳೀಧರ್.

ಇದನ್ನೂ ಓದಿ: Sportseam Exclusive: ಜೀವನದ ಅತ್ಯಂತ ಖುಷಿಯ ಕ್ಷಣ: ಮಯಾಂಕ್ ಅಗರ್ವಾಲ್

ಪ್ರತಿ ದಿನ 1000 ಎಸೆತಗಳ ಬ್ಯಾಟಿಂಗ್ ಅಭ್ಯಾಸ: 2017-18ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗಾಗಿ ಸಿದ್ಧತೆ ಆರಂಭಿಸಿದ ಮಯಾಂಕ್ ಕೋಚ್ ಆರ್.ಎಸ್ ಮುರಳೀಧರ್ ಗರಡಿಯಲ್ಲಿ ಕಠಿಣ ಅಭ್ಯಾಸ ನಡೆಸಲಾರಂಭಿಸಿದರು. ಪ್ರತಿ ದಿನ ನೆಟ್ಸ್ನಲ್ಲಿ ಒಂದು ಸಾವಿರ ಎಸೆತಗಳನ್ನು ಎದುರಿಸಿದರು. ಇದರ ಬಗ್ಗೆ 2017-18ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಸಂದರ್ಭದಲ್ಲಿ ಸ್ವತಃ ಮಯಾಂಕ್ ಅಗರ್ವಾಲ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಮೂರು ವರ್ಷಗಳಿಂದ ಆರ್‌ಎಕ್ಸ್‌ ಸರ್‌ ಜೊತೆ ಬ್ಯಾಟಿಂಗ್‌ ಟೆಕ್ನಿಕ್ ಸುಧಾರಣೆಯತ್ತ ಗಮನ ಹರಿಸಿದ್ದೆ. ನಂತರ ಈ ವರ್ಷ ವಿಭಿನ್ನವಾಗಿ ಅಭ್ಯಾಸ ನಡೆಸಿದ್ದೆ. ಬೇರೆ ಬೇರೆ ಸನ್ನಿವೇಶಗಳಲ್ಲಿ ನಾನು ಯಾವ ರೀತಿ ಪ್ರತಿಕ್ರಿಯಿಸುತ್ತೇನೆ ಎಂಬುದನ್ನು ಕೋಚ್‌ ಆರ್‌ಎಕ್ಸ್‌ ಪರೀಕ್ಷೆ ಮಾಡಿದರು. ಆಸ್ಟ್ರೋಟರ್ಫ್‌ ಪಿಚ್‌ಗೆ ನೀರು ಹಾಕಿ ಒದ್ದೆ ಪಿಚ್‌ನಲ್ಲಿ ಪ್ರತಿ ದಿನ 20 ಓವರ್‌ಗಳನ್ನು ಆಡುತ್ತಿದ್ದೆ. ಟರ್ನಿಂಗ್‌ ಟ್ರ್ಯಾಕ್‌ಗಳಲ್ಲಿ ಸ್ಪಿನ್ನರ್‌ಗಳನ್ನು ಹೇಗೆ ಎದುರಿಸಬೇಕು, ಮಣ್ಣಿನ ಪಿಚ್‌ನಲ್ಲಿ ಆಟದ ಹೇಗಿರಬೇಕು, ಹೀಗೆ ಬೇರೆ ಬೇರೆ ಪಿಚ್ಗಳಲ್ಲಿ ಯಾವ ರೀತಿ ಆಡಬೇಕು, ಪರಿಸ್ಥಿತಿಗೆ ಯಾವ ರೀತಿ ಒಗ್ಗಿಕೊಳ್ಳಬೇಕು ಎಂಬುದರ ಬಗ್ಗೆ ನಿರಂತರವಾಗಿ ಅಭ್ಯಾಸ ನಡೆಸಿದ್ದೆ. ಆರ್‌ಎಕ್ಸ್‌ ಸರ್‌ ಪ್ರತಿ ದಿನ ಸುಮಾರು 1000 ಎಸೆತಗಳನ್ನು ಎಸೆಯುತ್ತಿದ್ದರು.

ಮಯಾಂಕ್ ಅಗರ್ವಾಲ್, ಭಾರತ ತಂಡದ ಆಟಗಾರ.

ಇದನ್ನೂ ಓದಿ: ಮುಂಬೈ ಲಾಬಿಗೆ ಬಲಿಯಾದ ಕನ್ನಡಿಗ ಮಯಾಂಕ್ ಅಗರ್ವಾಲ್

ದೇಶೀಯ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿದ್ದ ಮಯಾಂಕ್: ಮಯಾಂಕ್ ಅಗರ್ವಾಲ್ ಪಟ್ಟ ಪರಿಶ್ರಮಕ್ಕೆ 2017-18ನೇ ಸಾಲಿನ ದೇಶೀಯ ಕ್ರಿಕೆಟ್ನಲ್ಲಿ ಭರ್ಜರಿ ಪ್ರತಿಫಲ ಸಿಕ್ಕಿತು. 2017-18ನೇ ಸಾಲಿನ ರಣಜಿ ಟ್ರೋಫಿಯಲ್ಲಿ 8 ಪಂದ್ಯಗಳಿಂದ 5 ಶತಕಗಳ ಸಹಿತ 1160 ರನ್ ಗಳಿಸಿದ್ದ ಮಯಾಂಕ್ ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. ಆ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಅಕ್ಷರಶಃ ರನ್ ಹೊಳೆಯನ್ನೇ ಹರಿಸಿದ್ದ ಮಯಾಂಕ್ 25ಪಂದ್ಯಗಳಿಂದ 8 ಶತಕಗಳ ಸಹಿತ 2141 ರನ್ ಕಲೆ ಹಾಕಿದ್ದರು. ಇದು ಭಾರತದ ದೇಶೀಯ ಕ್ರಿಕೆಟ್‌ನ ಒಂದೇ ಋತುವಿನಲ್ಲಿ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್. ಈ ಮೂಲಕ ಮಯಾಂಕ್ 2015-16ನೇ ಸಾಲಿನ ದೇಶೀಯ ಕ್ರಿಕೆಟ್ನಲ್ಲಿ ಮುಂಬೈನ ಶ್ರೇಯಸ್ ಅಯ್ಯರ್ ಅವರ 1947 ರನ್‌ಗಳ ದಾಖಲೆಯನ್ನು ಮುರಿದಿದ್ದರು. ಮಯಾಂಕ್ ಅವರ ದಾಖಲೆಯ 2141 ರಣಜಿ ಟ್ರೋಫಿಯ 1160 ರನ್‌ಗಳ ಜೊತೆಗೆ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ 8 ಪಂದ್ಯಗಳಿಂದ 3 ಶತಕಗಳ ಸಹಿತ 723 ರನ್ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ 9 ಪಂದ್ಯಗಳಿಂದ 258 ರನ್‌ಗಳು ಸೇರಿವೆ. 

LEAVE A REPLY

Please enter your comment!
Please enter your name here

6 + 12 =