ಮುಷ್ತಾಕ್ ಅಲಿ ಟಿ20 ಸೂಪರ್ ಲೀಗ್: ಮುಂಬೈಗೆ ಹೀನಾಯ ಸೋಲುಣಿಸಿದ ಕರ್ನಾಟಕ

0

ಇಂದೋರ್, ಮಾರ್ಚ್ 8: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ತಂಡ 9 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.ಈ ಗೆಲುವಿನ ಮೂಲಕ ಕರ್ನಾಟಕ ಪೂರ್ಣ 4 ಅಂಕ ತನ್ನದಾಗಿಸಿಕೊಂಡಿದೆ.

ಹೋಳ್ಕರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ, ಮನೀಶ್ ಪಾಂಡೆ ಬಳಗದ ದಾಳಿಗೆ ತತ್ತರಿಸಿ  9 ವಿಕೆಟ್ ನಷ್ಟಕ್ಕೆ ಕೇವಲ 97 ರನ್ ಕಲೆ ಹಾಕಿತು. ಜ್ಯೂನಿಯರ್ ಸಚಿನ್ ತೆಂಡೂಲ್ಕರ್ ಖ್ಯಾತಿಯ ಪೃಥ್ವಿ ಶಾ ಶೂನ್ಯಕ್ಕೆ ಮೊದಲ ಓವರ್ ನಲ್ಲೇ ದಾವಣಗೆರೆ ಎಕ್ಸ್ ಪ್ರೆಸ್ ಆರ್.ವಿನಯ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿದರು.  ನಾಯಕ ಶ್ರೇಯಸ್ ಅಯ್ಯರ್ ಕೇವಲ 10 ರನ್ ಗಳಿಸಿ ಯುವ ಆಲ್ರೌಂಡರ್ ಮನೋಜ್ ಭಾಂಡಗೆಗೆ ವಿಕೆಟ್ ಒಪ್ಪಿಸಿದರು.

ಕರ್ನಾಟಕ ಪರ ಎಲ್ಲಾ ಬೌಲರ್ ಗಳು ವಿಕೆಟ್ ಪಡೆದದ್ದು ವಿಶೇಷ. ವಿನಯ್(2/15) ಮತ್ತು ಭಾಂಡಗೆ(2/11) ತಲಾ 2 ವಿಕೆಟ್ ಉರುಳಿಸಿದರೆ, ಪ್ರಸಿದ್ಧ್ ಕೃಷ್ಣ(1/26), ವಿ.ಕೌಶಿಕ್(1/17), ಜೆ.ಸುಚಿತ್(1/12) ಮತ್ತು ಕೆಸಿ ಕಾರಿಯಪ್ಪ(1/14) ತಲಾ ಒಂದು ವಿಕೆಟ್ ಪಡೆದರು. 

ನಂತರ ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕ 13.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಎಡಗೈ ಆರಂಭಿಕ ಬ್ಯಾಟ್ಸ್ ಮನ್ ರೋಹನ್ ಕದಂ 45 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 65 ರನ್ ಗಳಿಸಿ ಕರ್ನಾಟಕದ ಸುಲಭ ಜಯಕ್ಕೆ ಕಾರಣರಾದರು. 

LEAVE A REPLY

Please enter your comment!
Please enter your name here

1 × 4 =