ಟೆನ್ನಿಸ್ ಬಾಲ್ ಕ್ರಿಕೆಟ್‌ನಿಂದ ಟಿ20 ಚಾಂಪಿಯನ್ ಕರ್ನಾಟಕ ತಂಡದವರೆಗೆ.. ಇದು ಕೌಶಿಕ್ ಕಮಾಲ್..!

0

ಬೆಂಗಳೂರು, ಮಾರ್ಚ್ 15: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಮೊದಲ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಮೊದಲ ಬಾರಿ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದ ಯುವ ಆಟಗಾರರ ಕೊಡುಗೆ ಗಮನಾರ್ಹ. ಕರ್ನಾಟಕ ತಂಡ ಚಾಂಪಿಯನ್ ಆಗುವಲ್ಲಿ ಯುವ ವೇಗದ ಬೌಲರ್ ವಿ.ಕೌಶಿಕ್ ಮಹತ್ವದ ಪಾತ್ರ ವಹಿಸಿದ್ದಾರೆ.

ಉದಯೋನ್ಮುಖ ಬಲಗೈ ವೇಗದ ಬೌಲರ್ ಆಗಿರುವ ಕೌಶಿಕ್, ಅವರ ಕ್ರಿಕೆಟ್ ಪಯಣ ಆರಂಭವಾಗಿದ್ದು ಟೆನ್ನಿಸ್ ಬಾಲ್ ಕ್ರಿಕೆಟ್ ನಿಂದ. ಅಲ್ಲಿಂದ ಆರಂಭಗೊಂಡ ಜರ್ನಿ ನಂತರ ಕರ್ನಾಟಕ ಪ್ರೀಮಿಯರ್ ಲೀಗ್ ಹಾಗೂ ಶಫಿ ದರಾಶ ಟೂರ್ನಿಯಲ್ಲಿ ತೋರಿ ಉತ್ತಮ ಪ್ರದರ್ಶನದಿಂದಾಗಿ ಕರ್ನಾಟಕ ಟಿ20 ತಂಡಕ್ಕೆ ಆಯ್ಕೆಯಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ ಕೌಶಿಕ್ ಕರ್ನಾಟಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೂಲಕ ತಮ್ಮ ಆಯ್ಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಕರ್ನಾಟಕ ತಂಡ

ಸೈಯದ್ ಮುಷ್ತಾಕ್ ಅಲಿ ಟೂರ್ನಿಯ 12 ಪಂದ್ಯಗಳ ಪೈಕಿ 10 ಪಂದ್ಯಗಳನ್ನಾಡಿದ ವಿ.ಕೌಶಿಕ್ 6.36ರ ಎಕಾನಮಿಯಲ್ಲಿ 17 ವಿಕೆಟ್ಸ್ ಪಡೆದಿದ್ದಾರೆ. ಮೊದಲ ಬಾರಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದ ಕೌಶಿಕ್, ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ಸ್ ಪಡೆದವರ ಸಾಲಿನಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಕೆಪಿಎಲ್ ಟೂರ್ನಿಯಲ್ಲಿ ಶಾಮನೂರು ದಾವಣಗೆರೆ ಡೈಮಂಡ್ಸ್, ಮೈಸೂರು ವಾರಿಯರ್ಸ್ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ತಂಡಗಳನ್ನು ಕೌಶಿಕ್ ಪ್ರತಿನಿಧಿಸಿದ್ದಾರೆ.

25 ವರ್ಷದ ಕೌಶಿಕ್ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಗೆಲುವು ಹಾಗೂ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ.

ದೆಹಲಿ ವಿರುದ್ಧದ ಪಂದ್ಯದಲ್ಲಿ ಅಗ್ರ ಮೂವರು ಆಟಗಾರರ ವಿಕೆಟ್ಸ್ ಸಹಿತ ನಾಲ್ಕು ವಿಕೆಟ್ಸ್ ಪಡೆದದ್ದು ಟೂರ್ನಿಯಲ್ಲಿ ನನ್ನ ಪಾಲಿಗೆ ಸ್ಮರಣೀಯ ಕ್ಷಣ. ಕಟಕ್ ನಲ್ಲಿ ನಡೆದ ಒಡಿಶಾ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ಸ್ ಪಡೆದದ್ದು ಖುಷಿಕೊಟ್ಟಿದೆ. ಅಲ್ಲದೆ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಎದುರಾಳಿ ತಂಡಕ್ಕೆ ಗೆಲ್ಲಲು 14 ರನ್ ಬೇಕಿದ್ದಾಗ ಕೇವಲ 3 ರನ್ ನೀಡಿ ತಂಡವನ್ನು ಗೆಲ್ಲಿಸಿದ್ದನ್ನು ಮರೆಯುವಂತಿಲ್ಲ.

– ವಿ.ಕೌಶಿಕ್, ಕರ್ನಾಟಕ ತಂಡದ ವೇಗದ ಬೌಲರ್

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಪರ ವಿ.ಕೌಶಿಕ್

MRF ಫೌಂಡೇಶನ್ ನಲ್ಲಿ ಆಸ್ಟ್ರೇಲಿಯಾದ ಬೌಲಿಂಗ್ ದಿಗ್ಗಜ ಗ್ಲೆಮ್ ಮೆಗ್ರಾತ್ ಅವರಿಂದ ಕೌಶಿಕ್ ಗೆ ತರಬೇತಿ ಪಡೆದಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಆರಂಭವಾಗಲಿರುವ KSCA ಲೀಗ್ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ಸ್ ಪಡೆಯುವ ಮೂಲಕ ರಣಜಿ ಟ್ರೋಫಿ ಆಡುವ ಗುರಿ ಹೊಂದಿದ್ದಾರೆ ಕೌಶಿಕ್.

MRF ಫೌಂಡೇಶನ್ ನಲ್ಲಿದ್ದಾಗ ಗ್ಲೆನ್ ಮೆಗ್ರಾತ್ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ನನ್ನ ಎತ್ತರ ಮತ್ತು ಬೌಲಿಂಗ್ ಶೈಲಿಯ ನೆರವಿನಿಂದ ಮತ್ತಷ್ಟು ವೇಗದಲ್ಲಿ ಬೌಲಿಂಗ್ ಮಾಡಬಹುದು ಎಂದು ಮೆಗ್ರಾತ್ ಹೇಳಿದ್ದಾರೆ. ಈಗ ನಾನು ಗಂಟೆಗೆ 125-127 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತೇನೆ. 135 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದು ನನ್ನ ಗುರಿ.

– ವಿ.ಕೌಶಿಕ್, ಕರ್ನಾಟಕ ತಂಡದ ವೇಗದ ಬೌಲರ್

ಕೌಶಿಕ್ ಆರಂಭದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟರ್ ಆಗಿದ್ದವರು. ಜೊತೆಗೆ ವೇಗದ ಬೌಲರ್ ಆಗಿರಲಿಲ್ಲ. ಬ್ಯಾಟ್ಸ್ ಮನ್ ಆಗಿದ್ದ ಕೌಶಿಕ್, ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಿದ್ದರು. ತಾವು ವೌಗದ ಬೌಲರ್ ಆಗಿದ್ದು ಹೇಗೆ ಎಂಬುದನ್ನು ಕೌಶಿಕ್ ವಿವರಿಸಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬೌಲಿಂಗ್ ಪಡೆ

ಟೆನ್ನಿಸ್ ಬಾಲ್ ಕ್ರಿಕೆಟ್ ನಿಂದ ನನ್ನ ಕ್ರಿಕೆಟ್ ಪಯಣ ಆರಂಭವಾಯಿತು. RWF ಮೈದಾನದಲ್ಲಿ ಕ್ರಿಕೆಟ್ ಕೋಚಿಂಗ್ ಶುರುವಾಯಿತು. ಅಲ್ಲಿ ಕೃಷ್ಣಮೂಪ್ತಿ ಎಂಬವರು ನನ್ನ ಮೊದಲ ಕೋಚ್ ಆಗಿದ್ದರು. ಕ್ರಿಕೆಟ್ ನ ಬೇಸಿಕ್ಸ್ ಗಳನ್ನು ಅವರಿಂದ ಕಲಿತೆ. ಆಗ ಬ್ಯಾಟ್ಸ್ ಮನ್ ಆಗಿದ್ದ ನಾನು ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಿದ್ದೆ. ಹಲವಾರು ರಾಷ್ಟ್ರೀಯ ಟೂರ್ನಿಗಳಲ್ಲಿ ನನ್ನ ಶಾಲಾ ತಂಡವಾದ ಕೇಂದ್ರೀಯ ವಿದ್ಯಾಲಯ(RWF) ತಂಡವನ್ನು ಪ್ರತಿನಿಧಿಸಿದ್ದೆ. ದೇಶಾದ್ಯಂತ 800-900 ಶಾಲೆಗಳು ಭಾಗವಹಿಸುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ(SGFI) ಟೂರ್ನಿಗಳಲ್ಲಿ ಆಡಿದ್ದೆ. 16 ಮತ್ತು 19ರ ವಯೋಮಿತಿಯಲ್ಲಿ ಕೇಂದ್ರೀಯ ವಿದ್ಯಾಲಯ ಸಂಘತನ್ ಅಖಿಲ ಭಾರತ ತಂಡವನ್ನು ಪ್ರತಿನಿಧಿಸಿದ್ದೆ. 4 ವರ್ಷಗಳ ಕಾಲ ಕೇಂದ್ರೀಯ ವಿದ್ಯಾಲಯ ಬೆಂಗಳೂರು ತಂಡದ ನಾಯಕನಾಗಿದ್ದೆ.

– ವಿ.ಕೌಶಿಕ್, ಕರ್ನಾಟಕ ತಂಡದ ವೇಗದ ಬೌಲರ್

12ನೇ ತರಗತಿಯವರೆಗೆ ಕೌಶಿಕ್ ಆಫ್ ಸ್ಪಿನ್ನರ್ ಆಗಿದ್ದರು. ಆದರೆ ನಂತರ ವೇಗದ ಬೌಲರ್ ಆಗಿ ಬದಲಾದರು. ಆಫ್ ಸ್ಪಿನ್ ಆಗಿದ್ದ ತಾವು ವೇಗದ ಬೌಲರ್ ಆಗಿದ್ದು ಹೇಗೆ ಎಂಬುದನ್ನು ಕೌಶಿಕ್ ವಿವರಿಸಿದ್ದಾರೆ.

ಕರ್ನಾಟಕ U-25 ತಂಡದೊಂದಿಗೆ ವಿ.ಕೌಶಿಕ್

ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಟೂರ್ನಿಯಲ್ಲಿ ಬೆಂಗಳೂರು ಕೇಂದ್ರೀಯ ವಿದ್ಯಾಲಯ ತಂಡದ ಪರ ಆಡುತ್ತಿದ್ದಾಗ ಆಫ್ ಸ್ಪಿನ್ ಬೌಲಿಂಗ್ ಮಾಡುತ್ತಿದ್ದೆ. ಆದರೆ ಅಂದುಕೊಂಡ ಯಶಸ್ಸು ಸಿಗಲಿಲ್ಲ. ಆ ಟೂರ್ನಿ ನನ್ನ ಪಾಲಿಗೆ ಅತ್ಯಂತ ನಿರಾಶಾದಾಯಕವಾಗಿತ್ತು. ಬೆಂಗಳೂರಿಗೆ ಬಂದು ಟೆನ್ನಿಸ್ ಬಾಲ್ ನಲ್ಲಿ ವೇಗದ ಬೌಲಿಂಗ್ ಆರಂಭಿಸಿದೆ. ಆಗ ಕೆಲವರು ”ನಿನ್ನ ಬೌಲಿಂಗ್ ನಲ್ಲಿ ವೇಗವಿದೆ” ಎಂದರು. ನಂತರ ವೇಗದ ಬೌಲಿಂಗ್ ಮುಂದುವರಿಸಿದೆ. ಕೆಲ ಅಭ್ಯಾಸ ಪಂದ್ಯಗಳು ನನಗೆ ಆತ್ಮವಿಶ್ವಾಸ ತುಂಬಿದವು. ಅಲ್ಲಿಂದ ವೇಗದ ಬೌಲಿಂಗ್ ನಲ್ಲಿ ಮುಂದುವರಿಯಲು ನಿರ್ಧರಿಸಿದೆ.

– ವಿ.ಕೌಶಿಕ್, ಕರ್ನಾಟಕ ತಂಡದ ವೇಗದ ಬೌಲರ್

ಆರಂಭದಲ್ಲಿ ಬೆಂಗಳೂರು ಕ್ರಿಕೆಟರ್ಸ್ ಪರ KSCA ಲೀಗ್ ಕ್ರಿಕೆಟ್ ಆಡಿದ ಕೌಶಿಕ್, ಸರ್ ಸೈಯದ್ ಕ್ರಿಕೆಟರ್ಸ್ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲೇ 6 ವಿಕೆಟ್ಸ್ ಪಡೆದು ಮಿಂಚಿದ್ದರು. ಮೊದಲ ವರ್ಷ 5 ಪಂದ್ಯಗಳನ್ನಾಡಿದ್ದ ಕೌಶಿಕ್, 15 ವಿಕೆಟ್ ಕಬಳಿಸಿದ್ದರು.

ಶ್ರೀ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿರುವ ಕೌಶಿಕ್, ಡಿಸ್ಟಿಂಕ್ಷನ್ ಸ್ಟೂಡೆಂಟ್ ಕೂಡ ಹೌದು. 17ನೇ ವಯಸ್ಸಿನಲ್ಲಿ ಕಾಡಿದ ಬೆನ್ನು ನೋವು ಕೌಶಿಕ್ ಅವರ ಕ್ರಿಕೆಟ್ ಬದುಕನ್ನೇ ಮುಗಿಸುವ ಹಂತದಲ್ಲಿತ್ತು. ಬೆನ್ನು ನೋವು, ಆ ನಂತರ ಕ್ರಿಕೆಟ್ ನಿಂದ ದೂರವಾದ ಬಗ್ಗೆ ಕೌಶಿಕ್ ಮಾತನಾಡಿದ್ದಾರೆ.

KPL ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಪರ ವಿ.ಕೌಶಿಕ್

ಕೆಪಿಎಲ್ ಟೂರ್ನಿಯಲ್ಲಿ ಶಾಮನೂರು ದಾವಣಗೆರೆ ಡೈಮಂಡ್ಸ್ ತಂಡಕ್ಕೆ ಆಯ್ಕೆಯಾಗಿದ್ದೆ. ನಂತರ ಬೆನ್ನು ನೋವು ಕಾಡಿತು. ಕ್ರಿಕೆಟ್ ಮೇಲಿನ ಪ್ರೀತಿಯಿಂದಾಗಿ ನೋವಿನ ನಡುವೆಯೂ ಆಡಲು ನಿರ್ಧರಿಸಿದ್ದೆ. ಆಗ ತಂಡದ ಫಿಸಿಯೊ ಆಗಿದ್ದ ಶ್ರವಣ್ ಸರ್, ಅದಕ್ಕೆ ಅವಕಾಶ ನೀಡಲಿಲ್ಲ. ”ನಿನಗಿನ್ನೂ 17 ವರ್ಷ. ಈಗ ರಿಸ್ಕ್ ತೆಗೆದುಕೊಂಡು ಆಡಿದರೆ, ಅದು ನಿನ್ನ ಕ್ರಿಕೆಟ್ ಕರಿಯರ್ ಗೆ ಮಾರಕವಾಗುವ ಸಾಧ್ಯತೆಯಿದೆ” ಎಂದರು. ಹೀಗಾಗಿ ನಾನು ಆ ಸೀಸನ್ ನಲ್ಲಿ ಯಾವುದೇ ಪಂದ್ಯವಾಡಲು ಸಾಧ್ಯವಾಗಲಿಲ್ಲ. 18 ತಿಂಗಳುಗಳ ಕಾಲ ಕ್ರಿಕೆಟ್ ನಿಂದ ಹೊರಗುಳಿಯುವಂತಾಯಿತು. ಆ ಸಂದರ್ಭದಲ್ಲಿ ನನ್ನ ಕ್ರಿಕೆಟ್ ಕರಿಯರ್ ಮುಗಿದೇ ಹೋಯಿತು ಎಂದು ಭಾವಿಸಿದೆ. ಅಲ್ಲದೆ ಎಂಜಿನಿಯರಿಂಗ್ ನತ್ತ ಗಮನ ಹರಿಸಿದೆ. ಆದರೆ ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಹೀಗಾಗಿ 18 ತಿಂಗಳುಗಳ ನಂತರ ಕ್ರಿಕೆಟ್ ಗೆ ಮರಳಿದೆ.

– ವಿ.ಕೌಶಿಕ್, ಕರ್ನಾಟಕ ತಂಡದ ವೇಗದ ಬೌಲರ್

ಕ್ರಿಕೆಟ್ ಗೆ ಮರಳಿದ ನಂತರ ಕೌಶಿಕ್ ಬೌಲಿಂಗ್ ಶೈಲಿ ಬದಲಿಸಿಕೊಂಡರು. KSCA ಜೋನಲ್ ಟೂರ್ನಿಗಳಲ್ಲಿ ಅಂಡರ್-19, 22, 25 ವಯೋಮಿತಿಗಳಲ್ಲಿ ಆಡಿದರು. 2014ರ ಅಂಡರ್-23 ಜೋನಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ಸ್ ಪಡೆದ ಕೌಶಿಕ್ ಅವರಿಗೆ ಕರ್ನಾಟಕದ ಅಂಡರ್-23 ಮತ್ತು ಅಂಡರ್-25 ತಂಡಗಳ ಪರ ಆಡುವ ಅವಕಾಶ ಸಿಕ್ಕಿತು. ಅಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಕೆಪಿಎಲ್ ಟೂರ್ನಿಯಲ್ಲಿ ಬಳ್ಳಾರಿ ಟಸ್ಕರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ.

2016ರಲ್ಲಿ ಮೈಸೂರು ವಾರಿಯರ್ಸ್ ಪರ ಆಡಿ ಗಮನ ಸೆಳೆದ 25 ವರ್ಷದ ಕೌಶಿಕ್, 2017ರ ಶಫಿ ದರಾಶ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ಸ್ ಪಡೆದಿದ್ದರು. ನಂತರ ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೆ 8 ವಿಕೆಟ್ ಪಡೆದು ಮಿಂಚಿದ್ದರು. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಕೌಶಿಕ್, ಭಾರತ ತಂಡದ ಪರ ಆಡಲಿ ಎಂಬುದು ಕನ್ನಡಿಗರ ಹಾರೈಕೆ.

LEAVE A REPLY

Please enter your comment!
Please enter your name here

18 + 7 =