ಮುಷ್ತಾಕ್ ಅಲಿ ಟಿ20: ಕರುಣ್, ಕದಮ್ ಸ್ಫೋಟಕ್ಕೆ ಕೊಚ್ಚಿ ಹೋದ ಮಿಜೋರಾಂ

0

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ 4ನೇ ಗೆಲುವು ದಾಖಲಿಸಿದೆ. ಕಟಕ್ ನಲ್ಲಿ ಸೋಮವಾರ ನಡೆದ ‘ಡಿ’ ಗುಂಪಿನ ತನ್ನ 4ನೇ ಪಂದ್ಯದಲ್ಲಿ ಬಲಿಷ್ಠ ಕರ್ನಾಟಕ ತಂಡ ದುರ್ಬಲ ಮಿಜೋರಾಂ ವಿರುದ್ಧ 137 ರನ್ ಗಳ ಭರ್ಜರಿ ಜಯ ದಾಖಲಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 242 ರನ್ ಗಳ ಭಾರೀ ಮೊತ್ತ ಕಲೆ ಹಾಕಿತು. ರನ್ ಮಷಿನ್ ಮಯಾಂಕ್ ಅಗರ್ವಾಲ್ 20 ರನ್ ಗಳಿಸಿ ಔಟಾದರೆ, ರೋಹನ್ ಕದಂ ಮತ್ತು ಕರುಣ್ ನಾಯರ್ ಸಿಡಿಲಬ್ಬರದ ಆಟವಾಡಿದರು. ಉತ್ತಮ ಫಾರ್ಮ್ ನಲ್ಲಿರುವ ರೋಹನ್ ಕದಂ 51 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 3 ಸಿಕ್ಸರ್ಸ್ ನೆರವಿನಿಂದ 78 ರನ್ ಸಿಡಿಸಿದರೆ, ಮಿಜೋರಾಂ ದಾಳಿಯನ್ನು ಚಿಂದಿ ಉಡಾಯಿಸಿದ ಕರುಣ್ ನಾಯರ್ ಕೇವಲ 33 ಎಸೆತಗಳಲ್ಲಿ 5 ಬೌಂಡರಿಗಳು ಮತ್ತು 5 ಸಿಕರ್ಸ್ ಸಿಡಿಸಿ 71 ರನ್ ಬಾರಿಸಿದರು. ನಾಯಕ ಮನೀಶ್ ಪಾಂಡೆ 13 ಎಸೆತಗಳಲ್ಲಿ ಅಜೇಯ 33 ರನ್ ಸಿಡಿಸಿದರು.

ನಂತರ ಅಸಾಧ್ಯ ಗುರಿ ಬೆನ್ನಟ್ಟಿದ ಮಿಜೋರಾಂ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಲಷ್ಟೇ ಶಕ್ತವಾಯಿತು. ಕರ್ನಾಟಕ ಪರ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 4 ಓವರ್ ಗಳಲ್ಲಿ ಕೇವಲ 8 ರನ್ನಿತ್ತು 4 ವಿಕೆಟ್ ಪಡೆದರೆ, ವೇಗಿ ವಿ.ಕೌಶಿಕ್ 4 ಓವರ್ ಗಳಲ್ಲಿ 17 ರನ್ನಿತ್ತು 1 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಕರ್ನಾಟಕ ತಂಡ ‘ಡಿ’ ಗುಂಪಿನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು 16 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡ ಛತ್ತೀಸ್ ಗಢ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

18 + nine =