10 ಎಕರೆಯಲ್ಲಿ ಮಿನಿ ಫಾರೆಸ್ಟ್ ನಿರ್ಮಿಸಿದ ವಿಜಯ್ ಭಾರದ್ವಾಜ್..!

0

ಬೆಂಗಳೂರು, ಜೂನ್ 1: ಕರ್ನಾಟಕದ ರಣಜಿ ಹೀರೊ ವಿಜಯ್ ಭಾರದ್ವಾಜ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಕರ್ನಾಟಕ ಕ್ರಿಕೆಟ್ ಪ್ರಿಯರ ನೆಚ್ಚಿನ ಆಟಗಾರ ವಿಜಯ್ ಭಾರದ್ವಾಜ್.
90ರ ದಶಕದ ಕೊನೆಯಲ್ಲಿ ಕರ್ನಾಟಕ ತಂಡ ಸತತವಾಗಿ ರಣಜಿ ಚಾಂಪಿಯನ್ ಆಗುವಲ್ಲಿ ವಿಜಯ್ ಭಾರದ್ವಾಜ್ ಅವರ ಪಾತ್ರ ಮಹತ್ವದ್ದಾಗಿತ್ತು.ಅದರಲ್ಲೂ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 1999ರಲ್ಲಿ ನಡೆದ ಮಧ್ಯಪ್ರದೇಶ ವಿರುದ್ಧದ ರಣಜಿ ಫೈನಲ್ ಪಂದ್ಯವನ್ನು ಕರುನಾಡ ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಅವತ್ತು ಫೈನಲ್ ಪಂದ್ಯದ 4ನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಬಳಿಸಿದ್ದ ಭಾರದ್ವಾಜ್ ಕರ್ನಾಟಕ ಚಾಂಪಿಯನ್ ಆಗಲು ಕಾರಣರಾಗಿದ್ದರು. ಭಾರತ ತಂಡವನ್ನೂ ಪ್ರತಿನಿಧಿಸಿರುವ ಕರ್ನಾಟಕದ ದಿಗ್ಗಜ ಭಾರದ್ವಾಜ್ 3 ಟೆಸ್ಟ್ ಹಾಗೂ 10 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನೂ ಆಡಿದ್ದಾರೆ.
ಕರುನಾಡ ಕ್ರಿಕೆಟ್ ಅಂಗಣದಲ್ಲಿ ದೊಡ್ಡ ಹೆಸರು ಮಾಡಿರುವ ವಿಜಯ್ ಭಾರದ್ವಾಜ್ ಇದೀಗ ತಮ್ಮ ಪರಿಸರ ಪ್ರೇಮದಿಂದಲೂ ಗಮನ ಸೆಳೆದಿದ್ದಾರೆ. ಬೆಂಗಳೂರು ಹೊರವಲಯದಲ್ಲಿ 10 ಎಕರೆ ಪ್ರದೇಶದಲ್ಲಿ ವಿಜಯ್ ಭಾರದ್ವಾಜ್ ಮಿನಿ ಅರಣ್ಯವನ್ನೇ ನಿರ್ಮಿಸಿದ್ದಾರೆ. ಅಲ್ಲಿ ಮಾವು, ಹಲಸು ಸಹಿತ ನಾಲ್ಕು ಸಾವಿರ ಮರಗಳನ್ನು ಬೆಳೆಸಿದ್ದಾರೆ. ಅವರು ನೆಟ್ಟಿರುವ ಸಾಗುವಾನಿ ಗಿಡಗಳು ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ 20 ಅಡಿ ಎತ್ತರ ಬೆಳೆದು ನಿಂತಿವೆ. ತಾವು ಬೆಳೆಸಿರುವ ಮಿನಿ ಫಾರೆಸ್ಟ್ ವಿಚಾರವನ್ನು ಸ್ವತಃ ವಿಜಯ್ ಭಾರದ್ವಾಜ್ ಅವರೇ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. 43 ವರ್ಷದ ವಿಜಯ್ ಭಾರದ್ವಾಜ್ ಸದ್ಯ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಗೆ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

nine − 1 =