ರಾಹುಲ್‌ಗೆ ಪಾಠ ಕಲಿಸಿದ ‘ಆ ದಿನಗಳು’: ಸ್ಫೋಟಕ ಸತ್ಯ ಬಿಚ್ಚಿಟ್ಟ ಕನ್ನಡಿಗ..!

0
PC: BCCI/Twitter

ಬೆಂಗಳೂರು, ಮಾರ್ಚ್ 27: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್, ಕಾಫಿ ವಿಥ್ ಕರಣ್ ಕಾರ್ಯಕ್ರಮದ ವಿವಾದದ ನಂತರ ತಾವು ಎದುರಿಸಿದ ಕಠಿಣ ಪರಿಸ್ಥಿತಿಯನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ.
‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಹುಲ್ ತಮ್ಮ ಕಷ್ಟದ ದಿನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಮಹಿಳೆಯ ಬಗ್ಗೆ ಕೆಟ್ಟ ಅಭಿರುಚಿಯ ಮಾತುಗಳನ್ನಾಡಿದ ಆರೋಪದ ಹಿನ್ನೆಲೆಯಲ್ಲಿ ಕ್ರಿಕೆಟ್ ನಿಂದ ಅಮಾನತುಗೊಂಡಿದ್ದರು. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ಇಬ್ಬರನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ಕೆಲ ದಿನಗಳ ನಂತರ ರಾಹುಲ್ ಮತ್ತು ಪಾಂಡ್ಯ ಮೇಲಿನ ಅಮಾನತನ್ನು ಬಿಸಿಸಿಐ ವಾಪಸ್ ಪಡೆದಿತ್ತು.

PC: Twitter

ಅದು ನಾನು ಎದುರಿಸಿದ ಅತ್ಯಂತ ಕಠಿಣ ಸನ್ನಿವೇಶ. ಜನರು ನನ್ನನ್ನು ಇಷ್ಟಪಡದಿರುವ ಸಂದರ್ಭವನ್ನು ನಾನು ಎಂದೂ ಎದುರಿಸಿರಲಿಲ್ಲ. ಮೊದಲ ಒಂದು ವಾರ ಅಥವಾ 10 ದಿನಗಳ ಕಾಲ ನನ್ನ ಬಗ್ಗೆಯೇ ಅನುಮಾನ ಶುರುವಾಗಿತ್ತು. ನನ್ನ ವ್ಯಕ್ತಿತ್ವದ ಬಗ್ಗೆಯೇ ನಾನು ಅನುಮಾನ ಪಡಲಾರಂಭಿಸಿದ್ದೆ.

– ಕೆ.ಎಲ್ ರಾಹುಲ್, ಭಾರತ ತಂಡದ ಆಟಗಾರ

ಐಪಿಎಲ್-12ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ರಾಹುಲ್ ಇನ್ನು ಕೆಲವೇ ವಾರಗಳಲ್ಲಿ 27ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಆ ಕಠಿಣ ದಿನಗಳಲ್ಲಿ ಜನರನ್ನು ಎದುರಿಸಲು ಭಯ ಪಟ್ಟಿದ್ದೆ ಎಂದು ರಾಹುಲ್ ಹೇಳಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ PC: BCCI

ಪ್ರಾಮಾಣಿಕವಾಗಿ ಹೇಳುವುದಾದರೆ ಆಗ ಮನೆಯಿಂದ ಹೊರಬರಲು ಭಯವಾಗಿತ್ತು. ಒಂದು ವೇಳೆ ಯಾರಾದರೂ ಪ್ರಶ್ನೆಗಳನ್ನು ಕೇಳಿದರೆ ಏನು ಹೇಳುವುದೆಂಬುದೇ ತಿಳಿದಿರಲಿಲ್ಲ. ಅಭ್ಯಾಸಕ್ಕೆ ಹೋಗಿ ಮನೆಗೆ ಬಂದು ಪ್ಲೇ ಸ್ಟೇಷನ್ ನಲ್ಲಿ ವೀಡಿಯೊ ಗೇಮ್ ಆಡುತ್ತಿದ್ದೆ. ಜನರನ್ನು ಎದುರಿಸಲು ನಾನು ಆಗ ಸಿದ್ಧನಿರಲಿಲ್ಲ. ಜನರು ಸಾಕಷ್ಟು ಮಾತನಾಡಿದರು. ಆದರೆ ಕುಟುಂಬ ಸದಸ್ಯರು, ಸ್ನೇಹಿತರು, ತಂಡದ ಸದಸ್ಯರು ನನಗೆ ಧೈರ್ಯ ತುಂಬಿದರು.

– ಕೆ.ಎಲ್ ರಾಹುಲ್, ಭಾರತ ತಂಡದ ಆಟಗಾರ

ಸ್ಟಾರ್ ಕ್ರಿಕೆಟಿಗರ ಹಿಂದಿರುವ ಗ್ಲಾಮರ್, ನಾವು ಬೆಳೆದು ಬಂದ ಹಾದಿ, ಹಿತೈಷಿಗಳಿಂದ ಸಂಪರ್ಕ ಕಳೆದುಕೊಳ್ಳುವಂತೆ ಮಾಡಿತು ಎಂದು ರಾಹುಲ್ ಒಪ್ಪಿಕೊಂಡಿದ್ದಾರೆ.

ದೇಶದ  ಪರ ಆಡಲು ಆರಂಭಿಸಿದ ನಂತರ ಮನಸ್ಸು ಚಂಚಲಗೊಳ್ಳುತ್ತದೆ. ಅತ್ತಿಂದಿತ್ತ ಚಲಿಸುತ್ತದೆ. ನಿಜವಾದ ಸ್ನೇಹಿತರು ಯಾರು ಎಂಬುದನ್ನು ಮರೆಯಲು ಆರಂಭಿಸುತ್ತೇವೆ. ಕುಟುಂಬದ ಪ್ರಾಮುಖ್ಯತೆ ಎಷ್ಟು ಎಂಬುದೂ ಮರೆತು ಹೋಗುತ್ತದೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತದೆ. ಸ್ನೇಹಿತರಿಗೆ ಸಮಯ ನೀಡುವ ಮನಸ್ಥಿತಿಯನ್ನು ಕಳೆದುಕೊಂಡಿರುತ್ತೇವೆ. ನಾನು ಅದೇ ಪರಿಸ್ಥಿತಿಯನ್ನು ಎದುರಿಸಿದೆ. ಈಗ ಎಲ್ಲವೂ ಅರ್ಥವಾಗಿದೆ.

– ಕೆ.ಎಲ್ ರಾಹುಲ್, ಭಾರತ ತಂಡದ ಆಟಗಾರ

PC: Twitter/Johns.

26 ವರ್ಷದ ರಾಹುಲ್ ಅಂತರಾಷ್ಟ್ರೀಯ ಕ್ರಿಕೆಟ್ ನ ಮೂರೂ ಪ್ರಕಾರಗಳಲ್ಲಿ ಶತಕ ಬಾರಿಸಿದ ಭಾರತದ ಮೂವರು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕಾಫಿ ವಿಥ್ ಕರಣ್ ಕಾರ್ಯಕ್ರಮದ ವಿವಾದದ ನಂತರದ ದಿನಗಳು ತಮಗೆ ತುಂಬಾ ಪಾಠ ಕಲಿಸಿತು ಎಂದು ರಾಹುಲ್ ಒಪ್ಪಿಕೊಂಡಿದ್ದಾರೆ. ಅಲ್ಲದೆ ದೈಹಿಕವಾಗಿ ಜೊತೆಗಿರುವವರು ಮಾತ್ರ ನಿಜವಾದ ಸ್ನೇಹಿತರೆಂದು ನಂಬಿದ್ದೆ. ಆದರೆ ನನ್ನ ಭಾವನೆ ತಪ್ಪಾಗಿತ್ತು ಎಂದಿದ್ದಾರೆ.

ದೈಹಿಕವಾಗಿ ಜೊತೆಗಿರುವವರೊಂದಿಗೆ ಸಾಕಷ್ಟು ಸಂಗತಿಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ನಮ್ಮ ಊರಿನಲ್ಲಿ ನಿಜವಾದ ಸ್ನೇಹಿತರಿದ್ದಾರೆ ಎಂಬುದನ್ನು ಮರೆತು ಬಿಡುತ್ತೇವೆ. ಅವರು ನಮ್ಮ ಕಷ್ಟದ ದಿನಗಳನ್ನು ನೋಡಿರುತ್ತಾರೆ. ನಾವು ಏನೂ ಅಲ್ಲದಿದ್ದಾಗ ಅವರು ನಮ್ಮ ಜೊತೆಗಿದ್ದವರಾಗಿರುತ್ತಾರೆ. ಅವರು ನಿಮ್ಮನ್ನು ನಿಜವಾಗಿಯೂ ಇಷ್ಟಪಟ್ಟಿರುತ್ತಾರೆ. ಏಕೆಂದರೆ ನಿಮ್ಮ ನಿಜವಾದ ವ್ಯಕ್ತಿತ್ವ ಅವರಿಗೆ ತಿಳಿದಿರುತ್ತದೆ. ಆ ಸ್ನೇಹಿತರೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯವಾಯಿತು.

– ಕೆ.ಎಲ್ ರಾಹುಲ್, ಭಾರತ ತಂಡದ ಆಟಗಾರ

ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ರಾಹುಲ್ ಐಪಿಎಲ್ ನಲ್ಲಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕಳೆದ ವರ್ಷದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

LEAVE A REPLY

Please enter your comment!
Please enter your name here

12 − one =