ರಾಹುಲ್ ಬಿದ್ದದ್ದೆಲ್ಲಿ..? ಮಯಾಂಕ್ ಗೆದ್ದದ್ದೆಲ್ಲಿ..? ಇದು ಗೆಳೆಯರ ದಂಗಲ್..!

0

ಬೆಂಗಳೂರು, ಅಕ್ಟೋಬರ್ 4: ಕಾಲಚಕ್ರ ಎಂದರೆ ಇದೇ. ಕೆ.ಎಲ್ ರಾಹುಲ್ ಭಾರತ ಟೆಸ್ಟ್ ತಂಡದಲ್ಲಿ ಮಿಂಚುತ್ತಿದ್ದ ಹೊತ್ತಲ್ಲಿ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯಲೂ ಒದ್ದಾಡುತ್ತಿದ್ದರು. ಈಗ ಅದೇ ಕೆ.ಎಲ್ ರಾಹುಲ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡು ಕರ್ನಾಟಕ ತಂಡಕ್ಕೆ ಮರಳಿದ್ದರೆ, ಮಯಾಂಕ್ ಅಗರ್ವಾಲ್ ಟೆಸ್ಟ್ ಕ್ರಿಕೆಟ್ನಲ್ಲಿ ಧೂಳೆಬ್ಬಿಸುತ್ತಿದ್ದಾರೆ.

ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್. ಪ್ರತಿಸ್ಪರ್ಧಿಗಳು ಎಂಬುದಕ್ಕಿಂತ ಇವರಿಬ್ಬರು ಆತ್ಮೀಯ ಗೆಳೆಯರು. ಒಟ್ಟೊಟ್ಟಿಗೇ ಕ್ರಿಕೆಟ್ ಕರಿಯರ್ ಆರಂಭಿಸಿ, ಒಟ್ಟೊಟ್ಟಿಗೇ ಭಾರತದ ಅಂಡರ್-19 ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದವರು. ಆದರೆ ಪ್ರತಿಭೆಯಲ್ಲಿ ಒಂದು ಕೈ ಮೇಲು ಎಂಬಂತಿದ್ದ ರಾಹುಲ್ 2010ರಲ್ಲಿ ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾದರು. ಆದರೆ ಮಯಾಂಕ್ ಅಗರ್ವಾಲ್ಗೆ ಕರ್ನಾಟಕ ತಂಡದ ಬಾಗಿಲು ತೆರೆಯಲು 2013ರವರೆಗೆ ಕಾಯಬೇಕಾಯಿತು. ಅದೇ ವರ್ಷ ರಾಹುಲ್ ರಣಜಿ ಟ್ರೋಫಿಯಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿ 2014ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿಯೇ ಬಿಟ್ಟಿದ್ದರು.

ಕಳೆದ ಐದು ವರ್ಷಗಳಲ್ಲಿ ರಾಹುಲ್ ಭಾರತ ಪರ 36 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 5 ಶತಕಗಳು ಮತ್ತು 11 ಅರ್ಧಶತಕಗಳ ನೆರವಿನಿಂದ 34.58ರ ಸರಾಸರಿಯಲ್ಲಿ 2006 ರನ್ ಗಳಿಸಿದ್ದಾರೆ. ರಾಹುಲ್ ಗಳಿಸಿದ ಐದು ಶತಕಗಳ ಪೈಕಿ 4 ಶತಕಗಳು ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನೆಲಗಳಲ್ಲಿ ಬಂದಿವೆ. ಹೌದು. ರಾಹುಲ್ ಪ್ರತಿಭಾವಂತ ಆಟಗಾರ. ಆದರೆ ಏನು ಪ್ರಯೋಜನ..? ಕಳೆದೊಂದು ವರ್ಷದಿಂದ ಕೊಟ್ಟ ಅವಕಾಶಗಳನ್ನೆಲ್ಲಾ ಕೈಚೆಲ್ಲಿ ಈಗ ಭಾರತ ಟೆಸ್ಟ್ ತಂಡದಿಂದಲೇ ಹೊರಬಿದ್ದಿದ್ದಾರೆ. ಆ ಸ್ಥಾನವನ್ನು ಆವರ ಆತ್ಮೀಯ ಗೆಳೆಯ ಮಯಾಂಕ್ ಅಗರ್ವಾಲ್ ಆಕ್ರಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿ, ತಮ್ಮ ಸ್ಥಾನವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

PC: BCCI

ಮಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸುತ್ತಿದ್ದಂತೆ ಇತ್ತ ಕರ್ನಾಟಕ ಪರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿರುವ ರಾಹುಲ್, ಗೆಳೆಯನ ಸಾಧನೆಗೆ ಶಹಬ್ಬಾಷ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಅಭಿನಂದನೆಗಳು ನನ್ನ ಸಹೋದರ. ನಿನ್ನ ಬಗ್ಗೆ ನನಗೆ ಹೆಮ್ಮೆಯಿದೆ. ಇದು ಆರಂಭ ಅಷ್ಟೇ ಎಂದು ಗೆಳೆಯನ ಬೆನ್ನು ತಟ್ಟಿದ್ದಾರೆ.

ಹಾಗಾದರೆ ರಾಹುಲ್ ಬಿದ್ದದ್ದೆಲ್ಲಿ..? ಮಯಾಂಕ್ ಗೆದ್ದದ್ದೆಲ್ಲಿ..? ಉತ್ತರ ಸಿಂಪಲ್. ಅದೇ ಹಸಿವು. ರಾಹುಲ್ ಐದು ವರ್ಷಗಳ ಹಿಂದೆಯೇ ಭಾರತ ತಂಡಕ್ಕೆ ಆಯ್ಕೆಯಾದಾಗ ಮಯಾಂಕ್ ಅಗರ್ವಾಲ್ ಅವರಿಗೆ ಇನ್ನೂ ಕರ್ನಾಟಕ ತಂಡದಲ್ಲಿ ಸ್ಥಾನ ಭದ್ರವಾಗಿರಲಿಲ್ಲ. ರಾಜ್ಯ ತಂಡದಲ್ಲೇ ಸ್ಥಾನ ಭದ್ರ ಪಡಿಸಿಕೊಳ್ಳುವುದಕ್ಕಾಗಿ ಮಯಾಂಕ್ ಹೋರಾಟ ನಡೆಸಬೇಕಾಗಿತ್ತು. ಆಗ ಭಾರತ ತಂಡದಲ್ಲಿ ಮಿಂಚಲಾರಂಭಿಸಿದ ರಾಹುಲ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಶತಕ ಬಾರಿಸಿ ಮಿಂಚಿದರು. ಶ್ರೀಲಂಕಾದಲ್ಲೂ ಶತಕ, ವೆಸ್ಟ್ ಇಂಡೀಸ್, ಇಂಗ್ಲೆಂಡ್ನಲ್ಲೂ ಶತಕಗಳು ಬಂದವು. ಆದರೆ ಆಟದ ಮೇಲಿನ ಫೋಕಸ್ ಕಡಿಮೆಯಾಯಿತೋ..? ಟಿ20 ಕ್ರಿಕೆಟ್ನ ಎಫೆಕ್ಟೋ ಗೊತ್ತಿಲ್ಲ. ರಾಹುಲ್ ಒಂದು ವರ್ಷದಲ್ಲಿ ಸಿಕ್ಕ ಅವಕಾಶಗಳನ್ನು ಕೈಚೆಲ್ಲುತ್ತಲೇ ಬಂದರು. ಮಾಜಿ ಕ್ರಿಕೆಟಿಗರು ನೀಡಿದ ಎಚ್ಚರಿಕೆಗಳೂ ರಾಹುಲ್ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಇದಕ್ಕೆ ಸಿಕ್ಕ ಉಡುಗೊರೆಯೇ ಟೆಸ್ಟ್ ತಂಡದಿಂದ ಗೇಟ್ಪಾಸ್.

ಒಬ್ಬರ ವಿಷ ಮತ್ತೊಬ್ಬರಿಗೆ ಅಮೃತ ಎಂಬ ಮಾತು ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ವಿಚಾರದಲ್ಲಿ ಅಕ್ಷರಶಃ ಸತ್ಯ. ರಾಹುಲ್ ವೈಫಲ್ಯ ಮಯಾಂಕ್ಗೆ ವರದಾನವಾಯಿತು. ಸತತ ಪರಿಶ್ರಮ ಪಟ್ಟು, ದಿನಗಟ್ಟಲೆ ನಿರಂತರ ಅಭ್ಯಾಸ ನಡೆಸಿ 2017-18ನೇ ಸಾಲಿನ ದೇಶೀಯ ಕ್ರಿಕೆಟ್ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ ಮಯಾಂಕ್, ಅದಕ್ಕೆ ಪ್ರತಿಫಲವನ್ನು ಈಗ ಪಡೆಯುತ್ತಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಪಟ್ಟ ಪರಿಶ್ರಮಕ್ಕೆ ಚೊಚ್ಚಲ ಟೆಸ್ಟ್ ಶತಕ ಒಲಿದಿದೆ.

ಮಯಾಂಕ್ ಈಗ ಭಾರತ ತಂಡದಲ್ಲಿ ಮಿಂಚುತ್ತಿದ್ದಾರೆ ನಿಜ. ಹಾಗಂತ ರಾಹುಲ್ಗೆ ಭಾರತ ಟೆಸ್ಟ್ ತಂಡದ ಬಾಗಿಲು ಮುಚ್ಚಿಯೇ ಹೋಯಿತು ಎಂದರ್ಥವಲ್ಲ. ರಾಹುಲ್ಗೆ ಇನ್ನೂ ವಯಸ್ಸಿದೆ. ದೇಶೀಯ ಕ್ರಿಕೆಟ್ನಲ್ಲಿ ಮತ್ತೆ ದೊಡ್ಡ ದೊಡ್ಡ ಇನ್ನಿಂಗ್ಸ್ಗಳನ್ನಾಡಿದರೆ ಭಾರತ ತಂಡದ ಬಾಗಿಲು ರಾಹುಲ್ಗೆ ಸದಾ ತೆರೆದೇ ಇರುತ್ತದೆ. ಏಕೆಂದರೆ ಪ್ರತಿಭೆಯ ವಿಚಾರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. 2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ತಮಿಳುನಾಡಿನ ದಿನೇಶ್ ಕಾರ್ತಿಕ್ 2019ರಲ್ಲಿ ವಿಶ್ವಕಪ್ ಆಡಲಿಲ್ವಾ..? ಹೀಗಾಗಿ ಅವಕಾಶಗಳು ಬಂದೇ ಬರುತ್ತವೆ. ಅದನ್ನು ಬಳಸಿಕೊಳ್ಳುವುದರಲ್ಲಿ ಇರುವುದೇ ಜಾಣತನ.

https://twitter.com/nanuramu/status/1179697520500342785

LEAVE A REPLY

Please enter your comment!
Please enter your name here

2 + one =