ಮೊದಲ ಪಂದ್ಯಕ್ಕೆ ಮಳೆಯ ಅಡ್ಡಿ

0

ಬೆಂಗಳೂರು, ಆಗಸ್ಟ್ 16:  ಕರ್ನಾಟಕ ಪ್ರೀಮಿಯರ್ ಲೀಗ್ ನ ಮೊದಲ ಪಂದ್ಯಕ್ಕೆ ಮಳೆಯ ಅಡ್ಡಿಯಾಯಿತು. ಪಂದ್ಯಕ್ಕೆ ಮಳೆ ಅಡ್ಡಿ ಮಾಡಿದಾಗ ಮೈಸೂರು ವಾರಿಯರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ತಂಡ 13 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ಕೆಪಿಎಲ್ ನ ಎಂಟನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಮೈಸೂರು ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಮುಖಾಮುಖಿಯಾದವು.

ಟಾಸ್ ಗೆದ್ದ ಮೈಸೂರು ತಂಡ ಫೀಲ್ಡಿಂಗ್ ಆಯ್ದುಕೊಂಡಿತು.ನಾಯಕ ಅಮಿತ್ ವರ್ಮಾ ಅವರ ಟಾಸ್ ಅಯ್ಜೆಯನ್ನು ಬೌಲರ್ ಗಳು ಉತ್ತಮ ರೀತಿಯಲ್ಲಿ ಸಮರ್ಥಿಸಿಕೊಂಡರು.

ಪಂದ್ಯಕ್ಕೆ ಮುನ್ನವೂ ಮಳೆ ಬಂದಿದ್ದ ಕಾರಣ ಬ್ಯಾಟ್ಸ್ ಮನ್ ಗಳಿಗೆ ರನ್ ನಿರೀಕ್ಷಿತ ಮಟ್ಟದಲ್ಲಿ ಗಳಿಸಲಾಗಲಿಲ್ಲ. ಜೆ. ಸುಚಿತ್ 3 ಓವರ್ ಗಳಲ್ಲಿ ಕೇವಲ 13 ರನ್ ನೀಡಿ ಅಮುಲ್ಯ 3 ವಿಕೆಟ್ ಗಳಿಸಿ ಬೆಂಗಳೂರಿನ ರನ್ ಗಳಿಕೆಗೆ ಕಡಿವಾಣ ಹಾಕಿದರು.

ಆರಂಭಿಕ ಆಟಗಾರ ಬಿ ಆರ್ ಶರತ್ 1 ಬೌಂಡರಿ ನೆರವಿನಿಂದ 13 ರನ್ ಗಳಿಸುತ್ತಲೇ ಸುಚಿತ್ ಬೌಲಿಂಗ್ ನಲ್ಲಿ ಸಿದ್ದಾರ್ಥ್ ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು.

ದೇಶೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ಸ್ಫೋಟಕ ಆಟಗಾರ ರೋಹನ್ ಕದಮ್ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 20 ಎಸೆತಗಳಲ್ಲಿ 23 ರನ್ ಗಳಿಸಿದರೂ ಸುಚಿತ್ ಅವರ ಸ್ಪಿನ್ ಮಂತ್ರಕ್ಕೆ ಬಲಿಯಾದರು. ಇದರೊಂದಿಗೆ ಬೆಂಗಳೂರಿನ ಬೃಹತ್ ಮೊತ್ತದ ಕನಸು ದೂರವಾಯಿತು. ಕಾರಣ ಕದಮ್ ಕ್ರೀಸಿನಲ್ಲಿ ಇರುವಾಗ ಬೃಹತ್ ಮೊತ್ತದ ಗುರಿ ಇರುವುದು ಸಹಜ. ಆದರೆ ಸ್ಫೋಟಕ ಆಟಗಾರನ ನಿರ್ಗಮನ ಬೆಂಗಳೂರು ಬ್ಲಾಸ್ಟರ್ಸ್ ಗೆ ಅಪಾರ ನಷ್ಟವನ್ನುಂಟುಮಾಡಿತು. ನಾಯಕ ರಾಂಗ್ಸೇನ್ ಜೊನಾಥನ್ ಕೂಡ ಸುಚಿತ್ ಅವರ ಸ್ಪಿನ್ ಜಾಲಕ್ಕೆ ಸಿಲುಕಿ ಕೇವಲ 17 ರನ್ ಗಳಿಸುತ್ತಲೇ ದೇವಯ್ಯಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು.

10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದ್ದ ಬೆಂಗಳೂರಿನ ರನ್ ಗಳಿಕೆಗೆ ಚುರುಕು ನೀಡಿದ್ದು ಯುವ ಆಟಗಾರ ನಿಕಿನ್ ಜೋಶ್. 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ ಜೋಶ್ ಅಜೇಯ 28 ರನ್ ಗಳಿಸಿ ಕುಸಿದ ತಂಡಕ್ಕೆ ಆಧಾರವಾಗಿದ್ದರು. ಕೆ ಎನ್ ಭರತ್ ಕ್ರೀಸಿನಲ್ಲಿ ಇದ್ದು ಉತ್ತಮ ಆಟ ಆಡುವ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿದ್ದಾರೆ. ಆದರೆ ಮಳೆ ಪಂದ್ಯಕ್ಕೆ ಅಡ್ಡಿ ಮಾಡಿತು.

ಮೈಸೂರು ವಾರಿಯರ್ಸ್ ಪರ ವೈಶಾಖ್ ವಿಜಯ ಕುಮಾರ್, ಕೆ ಎಸ್ ದೇವಯ್ಯ ಹಾಗೂ ವೆಂಕಟೇಶ್ ತಲಾ ಎರಡು ಓವರ್ ಗಳನ್ನು ಎಸೆದು ರನ್ ನಿಯಂತ್ರಿಸಿದ್ದರು. ನಾಯಕ ಅಮಿತ್ ವರ್ಮಾ 3 ಓವರ್ ಗಳಲ್ಲಿ 29 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.

ಸಂಕ್ಷಿಪ್ತ ಸ್ಕೋರ್: ಬೆಂಗಳೂರು ಬ್ಲಾಸ್ಟರ್ಸ್: 13 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 88 ರನ್ (ರೋಹನ್ ಕದಮ್ 23 , ಬಿ ಆರ್ ಶರತ್ 13 , ಜೊನಾಥನ್ 17 , ನಿಕಿನ್ ಜೋಶ್ 28 *, ಜೆ ಸುಚಿತ್ 13 ಕ್ಕೆ 3)

LEAVE A REPLY

Please enter your comment!
Please enter your name here

twenty − eight =