ಕೆಪಿಎಲ್ ಮ್ಯಾಚ್ ಫಿಕ್ಸಿಂಗ್..? ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅರೆಸ್ಟ್

0

ಬೆಂಗಳೂರು, ಸಪ್ಟೆಂಬರ್ 24: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ಕೇಳಿ ಬಂದಿರುವ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಹಿನ್ನೆಲೆಯಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ್ ಅಲಿ ಅಷ್ಫಕ್ ಥಾರಾ ಅವರನ್ನು ಬೆಂಗಳೂರಿನ ಕ್ರೈಂ ಬ್ರ್ಯಾಂಚ್ (ಸಿಸಿಬಿ) ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನಾಲ್ಕು ದಿನಗಳ ಹಿಂದೆಯೇ ಅಲಿ ಅಷ್ಫಕ್ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯ ವೇಳೆ ಅಲಿ ಅಷ್ಫಕ್ ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಬಂಧಿಸಲಾಗಿದೆ. ಅಲಿ ಅಷ್ಫಕ್ ಅವರಿಂದ ಈಗಾಗಲೇ ಮೊಬೈಲ್ ಹಾಗೂ ಲ್ಯಾಪ್’ಟ್ಯಾಪ್ ವಶಪಡಿಸಿಕೊಳ್ಳಲಾಗಿದ್ದು, ಮಹತ್ವದ ದಾಖಲೆಗಳು ಲಭ್ಯವಾಗಿವೆ.

PC: Belagavi Panthers

ಅಲಿ ಅಷ್ಫಕ್ ಅವರ ಜೊತೆ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಬಿಜಾಪುರ್ ಬುಲ್ಸ್ ತಂಡಗಳ ಕೆಲ ಆಟಗಾರರನ್ನು ಕಳೆದ ನಾಲ್ಕು ದಿನಗಳಲ್ಲಿ ವಿಚಾರಣೆ ನಡೆಸಲಾಗಿದೆ. ಈ ಆಟಗಾರರು ಕೆಪಿಎಲ್ ಟೂರ್ನಿಯ ಸಂದರ್ಭದಲ್ಲಿ ಅಲಿ ಅಷ್ಫಕ್ ಅವರೊಂದಿಗೆ ಫೋನ್ ಸಂಪರ್ಕದಲ್ಲಿದ್ದರು ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಆಟಗಾರರ ವಿಚಾರಣೆ ನಡೆದಿದೆ.

ಇದೀಗ ಅಲಿ ಅಷ್ಫಕ್ ಥಾರಾ ಅವರನ್ನು ಬಂಧಿಸಿರುವುದರಿಂದ ರಾಜ್ಯ ಕ್ರಿಕೆಟ್ ವಲಯದಲ್ಲಿ ಸಂಚಲನ ಸೃಷ್ಠಿಯಾಗಿದೆ. ಕೆಪಿಎಲ್ ಟೂರ್ನಿಯ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ನಡೆದಿರುವ ಸಾಧ್ಯತೆಯಿದ್ದು, ಇದರಲ್ಲಿ ಭಾಗಿಯಾಗಿರುವ ಆಟಗಾರರು, ತಂಡಗಳ ಮಾಲೀಕರು, ಕೋಚ್ಗಳು ಸೇರಿದಂತೆ ಹಲವರಿಗೆ ಆತಂಕ ಶುರುವಾಗಿದೆ.

ಯಾರು ಈ ಅಲಿ ಅಷ್ಫಕ್..?

ಅಲಿ ಅಷ್ಫಕ್ ಥಾರಾ ಬೆಂಗಳೂರು ಮೂಲದ ದುಬೈ ಉದ್ಯಮಿ. ಅಲಿ ಟೂರ್ & ಟ್ರಾವೆಲ್ಸ್ ಕಂಪನಿ ನಡೆಸುತ್ತಿರುವ ಅಲಿ, ದುಬೈ ಮತ್ತು ಬೆಂಗಳೂರಿನಲ್ಲಿ ತಮ್ಮ ಕಂಪನಿಯ ಬ್ರ್ಯಾಂಚ್ ಹೊಂದಿದ್ದಾರೆ. ಮುಖ್ಯವಾಗಿ ವಿಮಾನ ಟಿಕೆಟ್ ಬುಕ್ಕಿಂಗ್ ಮಾಡುವ ಕಂಪನಿ ಇದಾಗಿದೆ. 2017ರಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಖರೀದಿಸುವ ಮೂಲಕ ಅಲಿ ಅಷ್ಫಕ್ ಥಾರಾ ಕೆಪಿಎಲ್ ಟೂರ್ನಿಗೆ ಎಂಟ್ರಿ ಕೊಟ್ಟಿದ್ದರು. ಆ ವರ್ಷ ಬೆಳಗಾವಿ ಪ್ಯಾಂಥರ್ಸ್ ತಂಡ ಮೊದಲ ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು.

PC: Belagavi Panthers

ಕೆಪಿಎಲ್ ಟೂರ್ನಿಯಲ್ಲಿ ತಂಡ ಖರೀದಿಸುವ ಮೊದಲೇ ಅಲಿ ಅಷ್ಫಕ್ ಥಾರಾ ಬೆಟ್ಟಿಂಗ್ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಯುವ ಆಟಗಾರರನ್ನು ಪ್ರಚೋದಿಸಿ ಸ್ಪಾಟ್ ಫಿಕ್ಸಿಂಗ್ ನಡೆಸಿ ಕೋಟಿಗಟ್ಟಲೆ ದುಡ್ಡು ಸಂಪಾದಿಸುತ್ತಿದ್ದ ಎಂಬ ಆರೋಪ ಅಲಿ ಅಷ್ಫಕ್ ಮೇಲೆ ಈ ಹಿಂದೆಯೇ ಕೇಳಿ ಬಂದಿತ್ತು. ಸ್ವತಃ ಕೆಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದ ಆಟಗಾರರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಅಲಿ ಅಷ್ಟಕ್ ದಂಧೆಯ ಬಗ್ಗೆ ಬೇಸತ್ತಿದ್ದ ರಣಜಿ ತಂಡದ ಹಿರಿಯ ಆಟಗಾರರೊಬ್ಬರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಘಟನೆಯೂ 2017ರ ಟೂರ್ನಿಯ ವೇಳೆ ನಡೆದಿತ್ತು.

PC: Belagavi Panthers

ಕೆಪಿಎಲ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾಗಿರುವ ಫಿಕ್ಸಿಂಗ್, ಬೆಟ್ಟಿಂಗ್ ಬಗ್ಗೆ ಐಸಿಸಿ ಮತ್ತು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಮುಂದಾದ ಬೆಂಗಳೂರು ಸಿಸಿಬಿ ಪೊಲೀಸರು ಅಲಿ ಅಷ್ಫಕ್ ಥಾರಾ ಅವರನ್ನು ಬಂಧಿಸಿದ್ದಾರೆ. 

LEAVE A REPLY

Please enter your comment!
Please enter your name here

three + thirteen =