ಕೆಪಿಎಲ್ ಫಿಕ್ಸಿಂಗ್: ವೇಗಿ ಮಿಥುನ್‌ಗೆ ಸಿಸಿಬಿ ನೋಟಿಸ್.. ಇಲ್ಲಿದೆ ಅಸಲಿ ಕಾರಣ..!

0

ಬೆಂಗಳೂರು, ನವೆಂಬರ್ 27: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಟೂರ್ನಿಯಲ್ಲಿ ನಡೆದಿದೆ ಎನ್ನಲಾಗಿರುವ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದೆ. ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಕರ್ನಾಟಕ ತಂಡದ ಮಾಜಿ ನಾಯಕ ಸಿ.ಎಂ ಗೌತಮ್ ಸಹಿತ ಐವರು ಆಟಗಾರರನ್ನು ಅರೆಸ್ಟ್ ಮಾಡಿದ್ದಾರೆ. ಕೆ.ಸಿ ಕಾರಿಯಪ್ಪ ಸಹಿತ ಇನ್ನೂ ಹಲವರನ್ನು ವಿಚಾರಣೆ ನಡೆಸಿದ್ದಾರೆ.

ಈ ಮಧ್ಯೆ ಕರ್ನಾಟಕ ತಂಡದ ಪ್ರಮುಖ ವೇಗದ ಬೌಲರ್ ಅಭಿಮನ್ಯು ಮಿಥುನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಕೆಪಿಎಲ್ ಫಿಕ್ಸಿಂಗ್ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೆಲ ಸುದ್ದಿ ವಾಹಿನಿಗಳಲ್ಲಿ ವರದಿಯಾಗಿತ್ತು. ಆದರೆ ಮಿಥುನ್ ಅವರನ್ನು ಸಾಕ್ಷಿಯಾಗಿ ಹೇಳಿಕೆ ಪಡೆಯುವ ಉದ್ದೇಶದಿಂದ ನೋಟಿಸ್ ಜಾರಿ ಮಾಡಲಾಗಿದೆಯೇ ಹೊರತು, ಅವರು ಫಿಕ್ಸಿಂಗ್ನಲ್ಲಿ ಭಾಗಿಯಾಗಿಲ್ಲ ಎಂದು ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ.

ಈ ಹಿಂದೆ ಮಿಥುನ್ ಅವರು ಪ್ರತಿನಿಧಿಸಿದ್ದ ಬಿಜಾಪುರ ಬುಲ್ಸ್ ತಂಡದ ಮಾಲೀಕ ಕಿರಣ್ ಕಟ್ಟೀಮನಿ ಅವರನ್ನು ಮಂಗಳವಾರ ಮತ್ತು ಬುಧವಾರ ವಿಚಾರಣೆ ನಡೆಸಲಾಗಿದೆ. ಮ್ಯಾಚ್ ಫಿಕ್ಸಿಂಗ್ ವಿಚಾರದಲ್ಲಿ ಅತ್ಯಂತ ಕಟ್ಟು ನಿಟ್ಟಾಗಿರುವ ಮಿಥುನ್, ಮೋಸದಾಟವಾಡದಂತೆ ಯುವ ಕ್ರಿಕೆಟಿಗರನ್ನು ಎಚ್ಚರಿಸುತ್ತಾ ಬಂದಿದ್ದಾರೆ. ಇದೇ ವಿಚಾರವಾಗಿ 2017ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಪಂದ್ಯವೊಂದರ ನಂತರ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಹಾಗೂ ಸಿಇಒ ವಿರುದ್ಧ ಮಿಥುನ್ ಮೈದಾನದಲ್ಲೇ ತಮ್ಮ ಸಿಟ್ಟನ್ನು ಹೊರ ಹಾಕಿದ್ದರು. ಈ ಕುರಿತು ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಮಿಥುನ್ ಅವರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

four × 4 =