
ಬೆಂಗಳೂರು, ನವೆಂಬರ್ 7: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಮ್ಯಾಚ್ ಫಿಕ್ಸಿಂಗ್ ತನಿಖೆ ನಡೆಸುತ್ತಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಎರಡು ದೊಡ್ಡ ಬೇಟೆಯಾಡಿದ್ದಾರೆ. ಕರ್ನಾಟಕ ರಣಜಿ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಸಿ.ಎಂ ಗೌತಮ್ ಹಾಗೂ ರಾಜ್ಯ ರಣಜಿ ತಂಡದ ಮಾಜಿ ಆಲ್ರೌಂಡರ್ ಅಬ್ರಾರ್ ಕಾಜಿ ಅವರನ್ನು ಬಂಧಿಸಲಾಗಿದೆ.
2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಈ ಬಾರಿಯ ಕೆಪಿಎಲ್’ನಲ್ಲಿ ಸಿ.ಎಂ ಗೌತಮ್ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕತ್ವ ವಹಿಸಿದ್ದರು. ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಆಡಿ ಬಳ್ಳಾರಿ ತಂಡ ಸೋಲಲು 20 ಲಕ್ಷ ಪಡೆದಿರುವುದಾಗಿ ವಿಚಾರಣೆಯ ವೇಳೆ ಗೌತಮ್ ಒಪ್ಪಿಕೊಂಡಿದ್ದಾರೆ. ಅಬ್ರಾರ್ ಕಾಜಿ 5 ಲಕ್ಷ ಪಡೆದಿರುವುದಾಗಿ ಬಾಯ್ಬಿಟ್ಟಿದ್ದಾರೆ. ಈ ಹಿನ್ನೆನೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ. ಈ ಹಿಂದೆ ಮಾಜಿ ರಣಜಿ ಆಟಗಾರ ವಿನೂ ಪ್ರಸಾದ್, ನಿಶಾಂತ್ ಸಿಂಗ್ ಶೇಖಾವತ್ ಮತ್ತು ವಿಶ್ವನಾಥನ್ ಅವರನ್ನು ಬಂಧಿಸಲಾಗಿತ್ತು. ಫಿಕ್ಸಿಂಗ್’ನಲ್ಲಿ ಭಾಗಿಯಾಗಿರುವ ಮತ್ತಷ್ಟು ಆಟಗಾರರನ್ನು ಬಂಧಿಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.