ಕೆಪಿಎಲ್ ಮ್ಯಾಚ್ ಫಿಕ್ಸಿಂಗ್‌ನಲ್ಲಿದ್ದಾನಂತೆ ಕರ್ನಾಟಕದ ಇಂಟರ್‌ನ್ಯಾಷನಲ್ ಬೌಲರ್..!

0

ಬೆಂಗಳೂರು, ನವೆಂಬರ್ 11: ಕರ್ನಾಟಕ ಕ್ರಿಕೆಟ್ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಕರ್ನಾಟಕ ರಣಜಿ ತಂಡದ ಮಾಜಿ ನಾಯಕ, ಗೋವಾ ತಂಡಕ್ಕೆ ವಲಸೆ ಹೋಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಿ.ಎಂ ಗೌತಮ್ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗೌತಮ್ ಅವರಷ್ಟೇ ಅಲ್ಲದೆ, ರಾಜ್ಯ ರಣಜಿ ತಂಡದ ಮಾಜಿ ಆಲ್ರೌಂಡರ್ ಅಬ್ರಾರ್ ಕಾಜಿ, ಕೆಪಿಎಲ್ ಆಟಗಾರರಾದ ನಿಶಾಂತ್ ಸಿಂಗ್ ಶೇಖಾವತ್, ವಿನೂ ಪ್ರಸಾದ್, ವಿಶ್ವನಾಥನ್ ಅವರನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದೆ. ಇದಕ್ಕಿಂತಲೂ ಆಘಾತಕಾರಿ ವಿಚಾರ ಏನೆಂದರೆ ಭಾರತ ತಂಡದ ಪರ ಆಡಿದ ಕರ್ನಾಟಕದ ವೇಗದ ಬೌಲರ್ ಒಬ್ಬರ ಹೆಸರು ಫಿಕ್ಸಿಂಗ್ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ.

ಸಿ.ಎಂ ಗೌತಮ್ ಮತ್ತು ಅಬ್ರಾರ್ ಕಾಜಿ

ಟೀಮ್ ಇಂಡಿಯಾ ಪರ ಆಡಿರುವ ರಾಜ್ಯದ ವೇಗದ ಬೌಲರ್ ಒಬ್ಬರು ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಕರಣದ ತನಿಖೆಯ ನಡೆಸುತ್ತಿರುವ ಸಿಸಿಬಿ ಪೊಲೀಸರು ಆಫ್ ದಿ ರೆಕಾರ್ಡ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕೆಲ ದಿನಗಳ ಹಿಂದಷ್ಟೇ ಪರೋಕ್ಷವಾಗಿ ಸುಳಿವು ನೀಡಿದ್ದರು.

ಇನ್ನೂ ಇಬ್ಬರು ಅಂತರಾಷ್ಟ್ರೀಯ ಆಟಗಾರರು ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಬಗ್ಗೆ ನಮಗೆ ಸಾಕ್ಷಿ ಸಿಕ್ಕಿದೆ. ಆದರೆ ಅವರನ್ನು ಬಂಧಿಸದಂತೆ ಬೇರೆ ಬೇರೆ ಕಡೆಗಳಿಂದ ಒತ್ತಡ ಬರುತ್ತಿದೆ. ಆದರೆ ಯಾವ ಒತ್ತಡಕ್ಕೂ ನಾವು ಮಣಿಯುವುದಿಲ್ಲ. ಮ್ಯಾಚ್ ಫಿಕ್ಸಿಂಗ್ನಲ್ಲಿ ದೊಡ್ಡ ದೊಡ್ಡ ಉದ್ಯಮಿಗಳ ಪಾತ್ರ ಇರುವ ಬಗ್ಗೆಯೂ ಸಾಕ್ಷಿಗಳು ಲಭ್ಯವಾಗಿವೆ..

– ಭಾಸ್ಕರ್ ರಾವ್, ಬೆಂಗಳೂರು ಪೊಲೀಸ್ ಕಮಿಷನರ್

ಭಾಸ್ಕರ್ ರಾವ್ ಅವರು ಹೇಳುವಂತೆ ರಾಜ್ಯದ ಇನ್ನೂ ಇಬ್ಬರು ಅಂತರಾಷ್ಟ್ರೀಯ ಆಟಗಾರರು ಫಿಕ್ಸಿಂಗ್ ಪ್ರಕರಣದಲ್ಲಿದ್ದಾರೆ. ಹಾಗಾದರೆ ಅವರು ಯಾರು..? ಇದೇ ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಈಗಾಗಲೇ ಕೆಪಿಎಲ್ ಫಿಕ್ಸಿಂಗ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ರಾಜ್ಯ ಕ್ರಿಕೆಟ್ನ ಘನತೆ, ಗೌರವ ಮಣ್ಣು ಪಾಲಾಗಿದೆ. ದೇಶದ ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಕ್ರಿಕೆಟ್ಗೆ ತನ್ನದೇ ಆದ ಘನತೆ, ಗೌರವವಿತ್ತು.

PC: KCSA/Facebook

ದಿಗ್ಗಜ ಕ್ರಿಕೆಟಿಗರಾದ ಎರಾಪಳ್ಳಿ ಪ್ರಸನ್ನ, ಚಂದ್ರಶೇಖರ್, ಜಿ.ಆರ್ ವಿಶ್ವನಾಥ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್ ಅವರಂತಹ ಸಭ್ಯ ಕ್ರಿಕೆಟಿಗರು ಬಂದ ನಾಡಿಗೆ ಈಗ ಫಿಕ್ಸಿಂಗ್ ಕಳಂಕ ಮೆತ್ತಿಕೊಂಡಿದೆ. ರಾಜ್ಯ ಕ್ರಿಕೆಟ್ನಲ್ಲಿ ದೊಡ್ಡ ಹೆಸರು ಮಾಡಿರುವ ಅಂತರಾಷ್ಟ್ರೀಯ ಬೌಲರ್ ಒಬ್ಬನ ಹೆಸರು ಈಗ ಕೇಳಿ ಬರುತ್ತಿರುವುದು ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಅಕ್ಷರಶಃ ಬೆಚ್ಚಿ ಬೀಳಿಸಿದೆ. ಈಗಾಗಲೇ ಆ ಬೌಲರ್ ವಿರುದ್ಧ ಸಿಸಿಬಿ ಪೊಲೀಸರಿಗೆ ಮಹತ್ವದ ಸಾಕ್ಷಿಗಳು ಲಭ್ಯವಾಗಿದ್ದು, ಬಂಧಿಸುವುದಕ್ಕೂ ಮುನ್ನ ಇನ್ನೂ ಹೆಚ್ಚಿನ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯಾವುದೇ ರಾಜಕೀಯ ಒತ್ತಡಗಳಿಗೆ ಪೊಲೀಸರು ಮಣಿಯದೇ ಇದ್ದರೆ ಸದ್ಯದಲ್ಲೇ ಆ ಅಂತರಾಷ್ಟ್ರೀಯ ಬೌಲರ್ ಅರೆಸ್ಟ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ. 

LEAVE A REPLY

Please enter your comment!
Please enter your name here

14 + 14 =