ಕಾಲು ಬುಡದಲ್ಲೇ ಫಿಕ್ಸಿಂಗ್ ನಡೆಯುತ್ತಿದ್ದಾಗ ರಾಜ್ಯ ಕ್ರಿಕೆಟ್ ಸಂಸ್ಥೆ ನಿದ್ದೆ ಮಾಡುತ್ತಿತ್ತಾ..?

0

ಬೆಂಗಳೂರು, ನವೆಂಬರ್ 21: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನಲ್ಲಿ ನಡೆದಿದೆ ಎನ್ನಲಾಗಿರುವ ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ರಾಜ್ಯ ಕ್ರಿಕೆಟ್ ವಲಯ ತಲ್ಲಣಗೊಂಡಿದೆ. ಕ್ರಿಕೆಟ್ನ ಘನತೆ ಗೌರವವನ್ನು ಎತ್ತಿ ಹಿಡಿದ ಆಟಗಾರರು ಬಂದ ನಾಡು ಫಿಕ್ಸಿಂಗ್ ಕಳಂಕದಿಂದ ತಲೆ ತಗ್ಗಿಸುವಂತಾಗಿದೆ.

ಕರ್ನಾಟಕ ರಣಜಿ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಿ.ಎಂ ಗೌತಮ್, ರಾಜ್ಯ ರಣಜಿ ತಂಡದ ಮಾಜಿ ಆಲ್ರೌಂಡರ್ ಅಬ್ರಾರ್ ಕಾಜಿ, ಮಾಜಿ ರಣಜಿ ಕ್ರಿಕೆಟಿಗ ವಿನೂ ಪ್ರಸಾದ್, ಕೆಪಿಎಲ್ ಆಟಗಾರರಾದ ವಿಶ್ವನಾಥನ್, ನಿಶಾಂತ್ ಸಿಂಗ್ ಶೇಖಾವತ್ ಮತ್ತು ಇಬ್ಬರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲ, ಫಿಕ್ಸಿಂಗ್, ಬೆಟ್ಟಿಂಗ್ ದಂಧೆಯಲ್ಲಿ ಇನ್ನೂ ದೊಡ್ಡ ದೊಡ್ಡ ಹೆಸರುಗಳಿದ್ದು, ಸದ್ಯದಲ್ಲೇ ಅವರನ್ನೆಲ್ಲಾ ಬಂಧಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. ಕೆಲ ಆಟಗಾರರು ಹನಿ ಟ್ರ್ಯಾಪ್’ಗೂ ಬಲಿಯಾಗಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಹಾಗಾದರೆ ಕೆಪಿಎಲ್ ಟೂರ್ನಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಫಿಕ್ಸಿಂಗ್, ಬೆಟ್ಟಿಂಗ್, ಅಕ್ರಮ ನಡೆಯುತ್ತಿದ್ದರೂ, ಈ ಬಗ್ಗೆ ರಾಜ್ಯ ಕ್ರಿಕೆಟ್ ಸಂಸ್ಥೆ(KSCA)ಗೆ ಗೊತ್ತಿರಲಿಲ್ವಾ..? ಅಥವಾ ಗೊತ್ತಿದ್ದೂ ಸುಮ್ಮನೆ ಕಣ್ಣು ಮುಚ್ಚಿ ಕುಳಿತಿತ್ತಾ..? ಈ ಎರಡು ಪ್ರಶ್ನೆಗಳಲ್ಲಿ ಮೊದಲನೆಯದ್ದೇ ಸರಿ. ಏಕೆಂದರೆ ಕೆಪಿಎಲ್ ಅಕ್ರಮ KSCAಗೆ ಗೊತ್ತಿರಲಿಲ್ಲ ಎಂದರೆ ಅದನ್ನು ನಂಬಲು ಸಾಧ್ಯವೇ ಇಲ್ಲ. ಎಲ್ಲಾ ಗೊತ್ತಿದ್ದೂ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಸುಮ್ಮನಿದ್ದರು ಎಂಬ ಮಾತುಗಳು ರಾಜ್ಯ ಕ್ರಿಕೆಟ್ ಸಂಸ್ಥೆಯಿಂದಲೇ ಕೇಳಿ ಬರುತ್ತಿವೆ.

ಕೆಪಿಎಲ್ ಟೂರ್ನಿಯಲ್ಲಿ ಫಿಕ್ಸಿಂಗ್. ಬೆಟ್ಟಿಂಗ್ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆಯೇ ಈ ಆರೋಪ ಕೇಳಿ ಬಂದಿತ್ತು. ಈ ಹಿಂದೆ ಮೈಸೂರಿನಲ್ಲಿ ಒಬ್ಬ ಆಟಗಾರ ಅರೆಸ್ಟ್ ಕೂಡ ಆಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಆಟಗಾರರಷ್ಟೇ ಅಲ್ಲದೆ, ಕೆಲ ತಂಡಗಳ ಮಾಲೀಕರು, ಕೋಚ್’ಗಳು, ಮ್ಯಾನೇಜರ್’ಗಳು ಮತ್ತು ಸಹಾಯಕ ಸಿಬ್ಬಂದಿಯೂ ಫಿಕ್ಸಿಂಗ್, ಬೆಟ್ಟಿಂಗ್’ನಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಮಾಹಿತಿ ಇದ್ದರೂ ರಾಜ್ಯ ಕ್ರಿಕೆಟ್ ಸಂಸ್ಥೆ ಕಣ್ಣು ಮುಚ್ಚಿ ಕುಳಿತಿತ್ತು. ಅದಕ್ಕೆ ಈಗ ದೊಡ್ಡ ಬೆಲೆ ತೆತ್ತಿದೆ. ಕೆಪಿಎಲ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಿಂದ ಕರ್ನಾಟಕ ಕ್ರಿಕೆಟ್’ನ ಘನತೆ, ಗೌರವ ಮಣ್ಣು ಪಾಲಾಗಿದೆ. ದೀಪದ ಕೆಳಗೆ ಕತ್ತಲು ಎನ್ನುವುದು ಇದಕ್ಕೇ.

LEAVE A REPLY

Please enter your comment!
Please enter your name here

1 × 4 =