ಕ್ರಿಕೆಟ್: ದೇಶದ ಏಕೈಕ ಮಹಿಳಾ ಕ್ಯುರೇಟರ್.. ಕನಕಪುರದ ಜೆಸಿಂತಾ ಕರ್ನಾಟಕದ ಹೆಮ್ಮೆ..!

0

ಬೆಂಗಳೂರು, ಮಾರ್ಚ್ 11: ನೀವು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋದರೆ, ಅಲ್ಲೊಬ್ಬರು ಮಹಿಳೆ ಮೈದಾನದಲ್ಲಿ ಕೆಲಸ ಮಾಡುತ್ತಿರುತ್ತಾರೆ, ಮೈದಾನದ ಸಿಬ್ಬಂದಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಅವರೊಬ್ಬರು ಅಪರೂಪದ ಮಹಿಳೆ ಎಂದರೂ ತಪ್ಪಿಲ್ಲ. ಏಕೆಂದರೆ ಅವರು ದೇಶದ ಮೊದಲ ಮಹಿಳಾ ಕ್ಯುರೇಟರ್.

ಭಾರತದ ಮೊದಲ ಮಹಿಳಾ ಕ್ಯುರೇಟರ್ ಹೆಸರು ಜೆಸಿಂತಾ ಕಲ್ಯಾಣ್. ತಾಂತ್ರಿಕನಾಗಿ ಜೆಸಿಂತಾ ಇನ್ನೂ ಅಧಿಕೃತವಾಗಿ ಪಿಚ್ ಕ್ಯುರೇಟರ್ ಆಗಿಲ್ಲ. ಆದರೆ ಗ್ರೌಂಡ್ ಇನ್ ಚಾರ್ಜ್ ಆಗಿ ಕ್ಯುರೇಟರ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. 1993ರಿಂದಲೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA)ಯ ಉದ್ಯೋಗಿಯಾಗಿರುವ ಜೆಸಿಂತಾ, ಕೆಲ ವರ್ಷಗಳ ಹಿಂದಷ್ಟೇ ಗ್ರೌಂಡ್ ಇನ್ ಚಾರ್ಜ್ ಜವಾಬ್ದಾರಿ ವಹಿಸಿಕೊಂಡಿದ್ದರು. ಅದಕ್ಕೂ ಮೊದಲು ಜೆಸಿಂತಾ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಕ್ಲರಿಕಲ್ ಜಾಬ್ ಮಾಡುತ್ತಿದ್ದರು.

ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಕನಕಪುರದವರು ಈ ಜೆಸಿಂತಾ. ಅವರ ತಂದೆ ರೈತ ಮತ್ತು ಕಬ್ಬು ಬೆಳೆಗಾರರಾಗಿದ್ದರು.

ನಮ್ಮ ಹಳ್ಳಿಯಲ್ಲಿ ಶಾಲೆಗೆ ಹೋಗಬೇಕಾದರೆ 3-4 ಕಿ.ಮೀ ನಡೆಯಬೇಕಾಗಿತ್ತು. 10ನೇ ತರಗತಿ ಪೂರ್ತಿಗೊಳಿಸಿದ ನಂತರ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದೆ. ಆಗ ನನ್ನ ಸ್ನೇಹಿತರೊಬ್ಬರು KSCAನಲ್ಲಿ ಕೆಲಸವಿದೆ ಎಂದು ಹೇಳಿದರು. ಅಲ್ಲಿ ಮೊದಲು ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರಿದೆ.

– ಜೆಸಿಂತಾ ಕಲ್ಯಾಣ್, ಭಾರತದ ಮೊದಲ ಮಹಿಳಾ ಕ್ಯುರೇಟರ್

ತಮ್ಮ ಉಳಿದ ವಿದ್ಯಾಭ್ಯಾಸವನ್ನು ಸಂಜೆ ಕಾಲೇಜಿನಲ್ಲಿ ಪೂರ್ತಿಗೊಳಿಸುತ್ತಾರೆ ಜೆಸಿಂತಾ. ಬೆಳಗ್ಗೆ 8ರಿಂದ 4ರವರೆಗೆ ಕೆಲಸ ಮಾಡಿ ಸಂಜೆ 6ರಿಂದ 9ರವರೆಗೆ ಕಾಲೇಜಿಗೆ ಹೋಗುತ್ತಾರೆ. KSCAನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಜೆಸಿಂತಾ ಅವರಿಗೆ ಕಾರ್ಯದಕ್ಷತೆಯಿಂದಾಗಿ ಆಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಅಲ್ಲೂ ಉತ್ತಮಮ ಕಾರ್ಯದಕ್ಷತೆ ತೋರಿದ್ದರಿಂದ ಟಿಕೆಟಿಂಗ್ ಜವಾಬ್ದಾರಿ ಸಿಗುತ್ತದೆ.

15 ವರ್ಷಗಳ ಕಾಲ ನಾನು ಟೆಸ್ಟ್, ಏಕದಿನ ಮತ್ತು ಐಪಿಎಲ್ ಪಂದ್ಯಗಳಿಗೆ ಟಿಕೆಟಿಂಗ್ ಕೆಲಸ ಮಾಡಿದ್ದೇನೆ. 2014ರಲ್ಲಿ ಆಗ KSCA ಸಿಇಒ ಆಗಿದ್ದ ಎಂ.ಪಿ ಗಣೇಶ್ ಅವರು, ಮೈದಾನ ಸಿಬ್ಬಂದಿಯ ವಿಭಾಗದಲ್ಲಿ ಆಡಳಿತಗಾರ್ತಿಯಾಗಿ ಕೆಲಸ ಮಾಡುತ್ತೀರಾ ಎಂದು ಕೇಳಿದರು. ಅದಕ್ಕೆ ನಾನು ಒಪ್ಪಿದಾಗ ನನ್ನ ಹೆಸರನ್ನು ಅವರು ಆಗಿನ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಅವರಿಗೆ ಶಿಫಾರಸು ಮಾಡಿದರು.

– ಜೆಸಿಂತಾ ಕಲ್ಯಾಣ್, ಭಾರತದ ಮೊದಲ ಮಹಿಳಾ ಕ್ಯುರೇಟರ್

ಒಳಾಂಗಣ ಕೆಲಸದಿಂದ ಹೊರಾಂಗಣ ಕೆಲಸಕ್ಕೆ ಶಿಫ್ಟ್ ಆದ ಜೆಸಿಂತಾ ಕಲ್ಯಾಣ್ ಅವರಿಗೆ ಬಿಸಿಸಿಐ ಜೋನಲ್ ಕ್ಯುರೇಟರ್ ಕೆ.ಶ್ರೀರಾಮ್ ಮತ್ತು KSCA ಕ್ಯುರೇಟರ್ ಪ್ರಶಾಂತ್ ರಾವ್ ನೆರವಾಗುತ್ತಾರೆ.

ಇದನ್ನು ಕಲಿಯಲು 6 ತಿಂಗಳು ಬೇಕಾಯಿತು. ಹಿರಿಯ ಕ್ಯುರೇಟರ್ ಗಳಾದ ಶ್ರೀರಾಮ್ ಸರ್ ಮತ್ತು ಪ್ರಶಾಂತ್ ಸರ್ ಸಾಕಷ್ಟು ಹೇಳಿಕೊಟ್ಟರು. ಈ ಕೆಲಸದಲ್ಲಿ ನನಗೆ ತುಂಬಾ ಆಸಕ್ತಿಯಿದೆ.

– ಜೆಸಿಂತಾ ಕಲ್ಯಾಣ್, ಭಾರತದ ಮೊದಲ ಮಹಿಳಾ ಕ್ಯುರೇಟರ್

ಶ್ರೀರಾಮ್ ಹಾಗೂ ಪ್ರಶಾಂತ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಬೇರೆ ಕ್ರೀಡಾಂಗಣಗಳ ಜವಾಬ್ದಾರಿಗಾಗಿ ಬೇರೆ ಸ್ಥಳಗಳಿಗೆ ಹೋದಾಗ, ಚಿನ್ನಸ್ವಾಮಿ ಕ್ರೀಡಾಂಗಣವನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಜೆಸಿಂತಾ ಅವರದ್ದಾಗಿರುತ್ತದೆ.

ಹಗಲು ಹೊತ್ತಿನಲ್ಲಿ ಪಂದ್ಯಗಳಿದ್ದಾಗ ಬೆಳಗ್ಗೆ 7 ಗಂಟೆಗೆ ಬಂದು ಸಂಜೆ 7ಕ್ಕೆ ಮನೆ ಸೇರುತ್ತೇನೆ. ಐಪಿಎಲ್ ಪಂದ್ಯಗಳಿದ್ದಾಗ ಮನೆ ತಲುಪುವಾಗ ರಾತ್ರಿ 12 ಗಂಟೆಯಾಗುತ್ತದೆ.

 – ಜೆಸಿಂತಾ ಕಲ್ಯಾಣ್, ಭಾರತದ ಮೊದಲ ಮಹಿಳಾ ಕ್ಯುರೇಟರ್

LEAVE A REPLY

Please enter your comment!
Please enter your name here

five × five =