ರಣಜಿ ಫೈನಲ್ 1999: ಅವಿಸ್ಮರಣೀಯ ಗೆಲುವನ್ನು ಮೆಲುಕು ಹಾಕಿದ ಸುನಿಲ್ ಜೋಶಿ

0

ಬೆಂಗಳೂರು, ಏಪ್ರಿಲ್ 11: ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕ ತಂಡ ಅವಿಸ್ಮರಣೀಯ ಗೆಲುವುಗಳನ್ನು ಕಂಡಿದೆ. ನಮ್ಮ ಕರುನಾಡ ತಂಡ ಇಲ್ಲಿಯವರೆಗೆ 8 ಬಾರಿ ರಣಜಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಎಂಟೂ ಗೆಲುವುಗಳು ಅವಿಸ್ಮರಣೀಯ, ಅದ್ವಿತೀಯ. ಅದರಲ್ಲೂ 1999ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಧ್ಯಪ್ರದೇಶ ವಿರುದ್ಧದ ಫೈನಲ್ ಪಂದ್ಯವನ್ನು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ.

ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ತಂಡ 75 ರನ್ ಗಳ ಹಿನ್ನಡೆ ಅನುಭವಿಸಿತ್ತು. 5ನೇ ದಿನದಾಟದಲ್ಲಿ ಮೇಲುಗೈ ಸಾಧಿಸಿದ್ದ ಮಧ್ಯಪ್ರದೇಶ ಪಂದ್ಯವನ್ನು ಡ್ರಾಗೊಳಿಸುವತ್ತ ಸಾಗಿತ್ತು. ಪಂದ್ಯ ಡ್ರಾಗೊಂಡಿದ್ದರೆ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ರಣಜಿ ಟ್ರೋಫಿ ಮಧ್ಯಪ್ರದೇಶದ ಪಾಲಾಗುತ್ತಿತ್ತು. ಆದರೆ ದಿನದಾಟ ಮುಗಿಯಲು 15 ಓವರ್ ಗಳಿದ್ದಾಗ ನಾಯಕ ಸುನಿಲ್ ಜೋಶಿ ತೆಗೆದುಕೊಂಡ ಆ ಒಂದು ನಿರ್ಧಾರ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆದ್ದುಕೊಟ್ಟಿತ್ತು. ಆಫ್ ಸ್ಪಿನ್ನರ್ ವಿಜಯ್ ಭಾರದ್ವಾಜ್ ಕೈಗೆ ಚೆಂಡು ನೀಡಿದ್ದ ಜೋಶಿ ಅವರ ನಿರ್ಧಾರ ಕರ್ನಾಟಕವನ್ನು ರಣಜಿ ಚಾಂಪಿಯನ್ ಪಟ್ಟಕ್ಕೇರಿಸಿತ್ತು, ಮಾರಕ ದಾಳಿ ನಡೆಸಿದ್ದ ಭಾರದ್ವಾಜ್ ನಂಬಲಸಾಧ್ಯ ರೀತಿಯಲ್ಲಿ 24 ರನ್ನಿಗೆ 6 ವಿಕೆಟ್ ಉಡಾಯಿಸಿ ಕರ್ನಾಟಕಕ್ಕೆ ರಣಜಿ ಪ್ರಶಸ್ತಿ ಗೆದ್ದುಕೊಟ್ಟಿದ್ದರು.

1999ರ ಮಹಾ ವಿಜಯದ ಸುಮಧುರ ನೆನಪುಗಳನ್ನು ಸುನಿಲ್ ಜೋಶಿ ಟ್ವಿಟರ್ ಮೂಲಕ ಹೊರ ಹಾಕಿದ್ದಾರೆ. ಅದರ ಯಥಾವತ್ ವರದಿ ಇಲ್ಲಿದೆ ನೋಡಿ.

‘’1999 ರಣಜಿ ಫೈನಲ್ಸ್ ೪ನೇ ದಿನ ಸಂಜೆ ಮಳೆ ಬೀಳುತ್ತಾ ಇತ್ತು ರಾತ್ರಿಯ ವರೆಗು ಸುರಿತಾಯಿತ್ತು ಮಧ್ಯ ರಾತ್ರಿ ಸುಮಾರು 2:30 am ನಾನು, ವಿಜಯ್ ಭಾರದ್ವಾಜ್, ದೊಡ್ಡ ಗಣೇಶ್. ನಮಗೇ ಯೋಚನೆ ಇದ್ದಿದ್ದು ಸೂಪರ್ಸೊಫೆರ್ ಶುರು ಆಗುತ್ತಾ ಅಥವಾ ಇಲ್ವಾ ಯಾವ ಮೆಕ್ಯಾನಿಕ್ ಗ್ರೌಂಡ್ ಗೆ ಕರೆದು ಕೊಂಡು ಬರಬೇಕು ಅಂತ ಟೆನ್ಶನ್ ಇತ್ತು.

5 ನೇ ದಿನದ ಊಟದ ವಿರಾಮ – MP 121/3. ಹೇಗಾದರೂ ರಣಜಿ ಟ್ರೋಫಿ ಗೆಲ್ಲಲೇಬೇಕೆಂಬ ಹಂಬಲ ನನ್ನಲ್ಲಿತ್ತು. ಹಾಗಾಗಿ ತಂಡದಲ್ಲಿದ್ದ ಎಲ್ಲರನ್ನೂ ಕೇಳಿದೆ ಈ ಟ್ರೋಫಿಯನ್ನು ಗೆಲ್ಲಲೇಬೇಕೆಂಬ ಛಲ ನಿಮ್ಮಲ್ಲಿದಿಯೇ ಎಂದು ? ಎಲ್ಲರೂ ಹೂ ಎಂದರು. ಚಿನ್ನಸ್ವಾಮಿಯ ಸುತ್ತಲು ಕತ್ತಲಿಂದ ಕೂಡಿದ ಮೋಡ ಕವಿದ ವಾತಾವರಣ ಇತ್ತು. 

ತಂಡವಾಗಿ ನಮ್ಮ ಮೇಲೆ ನಮಗೆ ನಂಬಿಕೆ ಇತ್ತು. ಮೈದಾನಕ್ಕೆ ಕಾಲಿಟ್ಟೆವು. ಮೊದಲನೇ ಓವರ್ ನಲ್ಲೇ ಪಾಯಿಂಟ್ ನಿಂದ ಜಿಕೆ. ಅನಿಲ್ ಕುಮಾರ್ ಅವರು ಮಾಡಿದ ಸೊಗಸಾದ ರನ್ ಔಟ್ ಪಂದ್ಯದ ದಿಕ್ಕನ್ನೇ ಬದಲಿಸಿತು. MP 130/4. ಒಂದು ತಂಡವಾಗಿ ಕರ್ನಾಟಕ ಎಂಥ ಒಳ್ಳೆ ತಂಡ ಎಂದು ಪ್ರಪಂಚಕ್ಕೆ ತೋರಿಸಬೇಕು ಎಂದು ಪಣ ತೊಟ್ಟೆವು.  ಕ್ರಿಕೆಟ್ ಅಚ್ಚರಿಗಳಿಂದ ಕೂಡಿದ ಆಟ. ಡ್ರಿಂಕ್ಸ್ ಹೊತ್ತಿಗೆ ಹೊಸ ಚೆಂಡು ನಮಗೆ ಲಭ್ಯವಿತ್ತು. ಕೂಡಲೇ ತಗೊಂಡು ದೊಡ್ಡ ಗಣೇಶ್ ರಿಗೆ ಬೌಲ್ ಮಾಡಲು ಹೇಳಿದೆ. 5ನೇ ದಿನದ ಆಟ ಮುಗಿಯಲು ಕೇವಲ 15 ಓವರ್ ಗಳಿದ್ದವು. ಪೆವಿಲಿಯನ್ ತುದಿಯಿಂದ ದೊಡ್ಡ ಬೌಲ್ ಮಾಡಲು ಬಂದರು. ಯಾವುದೇ ಅಡಚಣೆ ಇಲ್ಲದೆ ಗುರಿ ಮುಟ್ಟೋದು ಸುಲಭವಲ್ಲ ಎಂದು ಎಲ್ಲರಿಗು ತಿಳಿದೇ ಇದೆ.

ಅಂಪೈರ್ ಗಳು ಮಂದ ಬೆಳಕಿನ ನೆಪವೊಡ್ಡಿ ವೇಗದ ಬೌಲರ್ ಗಳು ಬೌಲ್ ಮಾಡುವಂತಿಲ್ಲ ಎಂದರು. ಹಾಗಾದರೆ ಸರಿ !! ಸ್ಪಿನ್ನರ್ ಗಳೇ ಬೌಲ್ ಮಾಡಲಿದ್ದಾರೆ ಎಂದು ಅಂಪೈರ್ ಗಳಿಗೆ ಹೇಳಿ ಹೊಸ ಚೆಂಡನ್ನು ತೆಗೆದುಕೊಂಡು BEML ತುದಿ (ಈಗ KSCA ತುದಿ) ಇಂದ ನಾನೇ ಬೌಲ್ ಮಾಡಲು ಮುಂದಾದೆ. ಆಗ ಅಬ್ಬಾಸ್ ಅಲಿ 200 ಎಸೆತಗಳಲ್ಲಿ 47 ರನ್ ಗಳಿಸಿ ಒಂದೂ ಕೆಟ್ಟ ಹೊಡೆತಕ್ಕೆ ಕೈ ಹಾಕದೆ ತಾಳ್ಮೆಯ ಆಟವನ್ನಾಡುತ್ತಿದ್ದರು. ನಾನು ಮಾಡಿದ ಮೊದಲ ಬಾಲ್ ನಲ್ಲೇ ಅಬ್ಬಾಸ್ ಅಲಿ ಮೊದಲ ಸ್ಲಿಪ್ ನಲ್ಲಿದ್ದ ಗಣೇಶ್ ಗೆ ಕ್ಯಾಚ್ ಕೊಟ್ಟರು. ಅಲ್ಲಿಗೆ ಅವರ ಅರ್ಧ ತಂಡ ಪೆವಿಲಿಯನ್ ನಲ್ಲಿತ್ತು. ಆಗ ತಂಡವಾಗಿ ನಮ್ಮ ನಂಬಿಕೆ ಇಮ್ಮಡಿಯಾಯಿತು. ಕೂಡಲೇ ಪೆವಿಲಿಯನ್ ತುದಿಯಿಂದ ‘Magician’ ವಿಜಯ್ ಭಾರದ್ವಾಜ್ ರಿಗೆ ಬೌಲಿಂಗ್ ಕೊಟ್ಟೆ. ಹೆಚ್ಚು ಸಮಯ ಹಾಳು ಮಾಡದೆ ವಿಜಿ ನಿರಾಯಾಸವಾಗಿ ಬಾಲಂಗೋಚಿಗಳನ್ನು ಔಟ್ ಮಾಡಿದರು. ನಾವು ಪವಾಡ ಮಾಡಿದೆವು. ಇನ್ನಿಂಗ್ಸ್ ಹಿನ್ನಡೆ ಅನುಭವಿಸಿಯೂ 96 ರನ್ ಗಳಿಂದ ಗೆದ್ದು ಇತಿಹಾಸ ಸೃಷ್ಟಿಸಿದೆವು’’ – ಸುನಿಲ್ ಜೋಶಿ, ಕರ್ನಾಟಕ ತಂಡದ ಮಾಜಿ ನಾಯಕ.

LEAVE A REPLY

Please enter your comment!
Please enter your name here

nine − 6 =