2015ರಲ್ಲಿ ಕಾರು ಅಪಘಾತ, 2019ರಲ್ಲಿ ವಿಶ್ವಕಪ್ ಸೆಂಚುರಿ… ಇದು ನಿಕೋಲಸ್ ಪೂರನ್ ಯಶೋಗಾಥೆ

0

ಚೆಸ್ಟರ್ ಲೀ ಸ್ಟ್ರೀಟ್, ಜುಲೈ 2: ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ ವೆಸ್ಟ್ ಇಂಡೀಸ್’ನ ಯುವ ಬ್ಯಾಟ್ಸ್’ಮನ್ ನಿಕೋಲಸ್ ಪೂರನ್ ಅವರ ಕ್ರಿಕೆಟ್ ಬದುಕು ಒಂದು ರೀತಿಯಲ್ಲಿ ಅಚ್ಚರಿ ಮೂಡಿಸುವಂಥದ್ದು.
23 ವರ್ಷದ ಎಡಗೈ ಬ್ಯಾಟ್ಸ್’ಮನ್ ಪೂರನ್ 2015ರಲ್ಲಿ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. 2015ರ ವಿಶ್ವಕಪ್ ಸಂದರ್ಭದಲ್ಲಿ ನಡೆದಿದ್ದ ಆ ಅಪಘಾತದಲ್ಲಿ ಪೂರನ್ ಅವರ ಎರಡೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಮತ್ತೆ ಕ್ರಿಕೆಟ್ ಆಡುವುದಿರಲಿ, ಎದ್ದು ನಡೆಯುವುದೇ ಅನುಮಾನವಾಗಿತ್ತು. ಆದರೆ ಗಾಯದಿಂದ ಚೇತರಿಸಿಕೊಂಡ ಪೂರನ್ ನಡೆದಾಡಲು ಏಳು ತಿಂಗಳುಗಳೇ ಬೇಕಾದವು.
ನಡೆದಾಡಲು ಆರಂಭಿಸಿದ ನಂತರ ನಿಧಾನವಾಗಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ ನಿಕೋಲಸ್ ಪೂರನ್, ಈ ಬಾರಿಯ ವಿಶ್ವಕಪ್’ನಲ್ಲಿ ಆಡುತ್ತಿರುವ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಸೋಮವಾರ ಶ್ರೀಲಂಕಾ ವಿರುದ್ಧ ಚೆಸ್ಟರ್ ಲೀ ಸ್ಟ್ರೀಟ್’ನಲ್ಲಿ ನಡೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಆತ್ಮಸ್ಥೈರ್ಯದ ಮುಂದೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
103 ಎಸೆತಗಳನ್ನೆದುರಿಸಿದ ಪೂರನ್ 11 ಬೌಂಡರಿಗಳು ಮತ್ತು 4 ಸಿಕ್ಸರ್ಸ್ ನೆರವಿನಿಂದ ಸ್ಫೋಟಕ 118 ರನ್ ಗಳಿಸಿ ಏಕದಿನ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಐಪಿಎಲ್-12 ಟೂರ್ನಿಯಲ್ಲಿ ನಿಕೋಲಸ್ ಪೂರನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದರು.

LEAVE A REPLY

Please enter your comment!
Please enter your name here

three × 1 =