10-6-6-5: ಜೋಶಿ ಸ್ಪಿನ್ ವಿಕ್ರಮಕ್ಕೆ 20 ವರ್ಷ.. ಸಂತಸ ಹಂಚಿಕೊಂಡ ಸ್ಪಿನ್ ಮಾಂತ್ರಿಕ

0

ಬೆಂಗಳೂರು, ಸಪ್ಟೆಂಬರ್ 26: ಕರ್ನಾಟಕದ ಸ್ಪಿನ್ ಮಾಂತ್ರಿಕ ಸುನಿಲ್ ಜೋಶಿ ಅವರಿಗೆ ಇಂದು ಸ್ಮರಣೀಯ ದಿನ. ಇವತ್ತು ಗದುಗಿನ ಜೋಶಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ (10-6-6-5) ತೋರಿದ ದಿನ.

1999ರ ಸಪ್ಟೆಂಬರ್ 26ರಂದು ಕೀನ್ಯಾದ ನೈರೋಬಿಯಲ್ಲಿ ನಡೆದಿದ್ದ ಎಲ್.ಜಿ ಕಪ್ ಏಕದಿನ ಟೂರ್ನಿಯ ಪಂದ್ಯದಲ್ಲಿ ಸುನಿಲ್ ಜೋಶಿ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು. 10 ಓವರ್ ಬೌಲಿಂಗ್ ಮಾಡಿದ್ದ ಎಡಗೈ ಸ್ಪಿನ್ನರ್ ಜೋಶಿ 6 ಮೇಡನ್ ಓವರ್ಗಳೊಂದಿಗೆ ಕೇವಲ 6 ರನ್ನಿತ್ತು 5 ವಿಕೆಟ್ ಕಬಳಿಸಿದ್ದರು.

20 ವರ್ಷಗಳ ಹಿಂದೆ ನಡೆದಿದ್ದ ಆ ಪಂದ್ಯದಲ್ಲಿ ಸುನಿಲ್ ಜೋಶಿ ಅವರ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದವರೆಂದರೆ ಬೋಯೆಟಾ ಡಿಪೆನ್ನಾರ್, ಹರ್ಷಲ್ ಗಿಬ್ಸ್, ಅಂದಿನ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದ ಹ್ಯಾನ್ಸಿ ಕ್ರೋನ್ಜೆ, ಜಾಂಟಿ ರೋಡ್ಸ್ ಮತ್ತು ಶಾನ್ ಪೊಲ್ಲಾಕ್.

ತಮ್ಮ ಐತಿಹಾಸಿಕ ಸಾಧನೆಗೆ 20 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನ ಸುನಿಲ್ ಜೋಶಿ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ಎಲ್ಲಾ ಕ್ರೀಡಾಭಿಮಾನಿಗಳಿಗೆ ನಮಸ್ಕಾರ. ಇವತ್ತನ ದಿನ ವಿಶೇಷತೆ ಏನೆಂದರೆ, 1999ರಲ್ಲಿ ಎಲ್.ಜಿ ಕಪ್…, ದಕ್ಷಿಣ ಆಫ್ರಿಕಾ ತಂಡ…, ಏನ್ ನೆನಪಾಗುತ್ತೆ..? ಅದು ನನ್ನ ಜೀವನದಲ್ಲಿ ಮಹತ್ವದ ದಿನ. ನನ್ನ ಪಾಲಿಗೆ ಅದು ಅವಿಸ್ಮರಣೀಯ ದಿನ. ಏಕೆಂದರೆ ಅವತ್ತು ನಾನು 10-6-6-5 ಸಾಧನೆ ಮಾಡಿದ ದಿನ. ಅದನ್ನು ಯಾವತ್ತಿಗೂ ಮರೆಯೋದಕ್ಕೆ ಆಗಲ್ಲ. ಆ ಸಾಧನೆಗೆ ಇವತ್ತಿಗೆ 20 ವರ್ಷ ತುಂಬಿದೆ. ಅವತ್ತಿನ ದಿನ ಏನಾಯಿತು ಅಂದ್ರೆ ಟಾಸ್ ಗೆದ್ದು ನಾವು ಬೌಲಿಂಗ್ ಮಾಡಿದ್ವಿ. ಪವರ್ ಪ್ಲೇನಲ್ಲೇ ನನಗೆ ಅಜಯ್ ಜಡೇಜಾ ಬೌಲಿಂಗ್ ಅವಕಾಶ ನೀಡಿದರು. ಮೊದಲ ಎಸೆತ ಹಾಕಿದಾಗ ಈ ಪಿಚ್ನಲ್ಲಿ ನಿನಗೆ ಏನೋ ಕಾದಿದೆ ಎಂದು ಅಂಪೈರ್ ಹೇಳಿದ್ರು. ಆ ನಂತರ ನಡೆದದ್ದು ಇತಿಹಾಸ. ನಾನು ಹಾಕಿದ 10 ಓವರ್ಗಳಲ್ಲಿ 6 ಮೇಡನ್, 6 ರನ್, 5 ವಿಕೆಟ್. ಮೊದಲ ವಿಕೆಟ್ ಬೋಯೆಟಾ ಡಿಪೆನ್ನಾರ್ ಬೌಲ್ಡ್, ಆ ನಂತ್ರ ಹರ್ಷಲ್ ಗಿಬ್ಸ್ ಸ್ಲಿಪ್ನಲ್ಲಿ ರಾಹುಲ್ ದ್ರಾವಿಡ್ ಅವರಿಂದ ಅದ್ಭುತ ಕ್ಯಾಚ್, ನಂತ್ರ ಬಂದ ಹ್ಯಾನ್ಸಿ ಕ್ರೋನ್ಜೆ ಸಿಲ್ಲಿ ಪಾಯಿಂಟ್ನಲ್ಲಿ ಕ್ಯಾಚ್ ನೀಡಿದ್ರು. ಜಾಂಟಿ ರೋಡ್ಸ್ ಬಂದಾಗ ಅದೇ ಫೀಲ್ಡ್ ಸೆಟ್ ಇತ್ತು. ಜಾಂಟಿ ರಿವರ್ಸ್ ಸ್ವೀಪ್ ಹೊಡೆದು ಪಾಯಿಂಟ್ನಲ್ಲಿ ಕ್ಯಾಚ್ ನೀಡಿದ್ರು. ನಂತ್ರ ಬಂದ ಶಾನ್ ಪೊಲ್ಲಾಕ್ ಸ್ಲಿಪ್ನಲ್ಲಿ ರಾಹುಲ್ ದ್ರಾವಿಡ್ ಹಿಡಿದ ಮತ್ತೊಂದು ಅದ್ಭುತ ಕ್ಯಾಚ್ಗೆ ಔಟಾದ್ರು.

 – ಸುನಿಲ್ ಜೋಶಿ, ಸ್ಪಿನ್ ಮಾಂತ್ರಿಕ.

49 ವರ್ಷದ ಸುನಿಲ್ ಜೋಶಿ ಸದ್ಯ ಉತ್ತರ ಪ್ರದೇಶ ತಂಡದ ಕೋಚ್ ಆಗಿದ್ದಾರೆ. ಈ ಹಿಂದೆ ಜೋಶಿ ಬಾಂಗ್ಲಾದೇಶ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು.

 

ಸುನಿಲ್ ಜೋಶಿ ಅವರ 10-6-6-5 ಸ್ಪಿನ್ ಮ್ಯಾಜಿಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಸುನಿಲ್ ಜೋಶಿ ಅವರ 10-6-6-5 ಸ್ಪಿನ್ ಮ್ಯಾಜಿಕ್ ಸ್ಕೋರ್ ಕಾರ್ಡ್ ನೋಡಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here

seventeen + fourteen =