ಸ್ಮಶಾನದಲ್ಲಿ ಮಲಗಿದ, 10 ದಿನ ಹೊಟ್ಟೆಗೆ ಹಿಟ್ಟಿಲ್ಲದೆ ಬದುಕಿದ… ಈಗ ಟೀಮ್ ಇಂಡಿಯಾದ ಬೆನ್ನೆಲುಬು!

0
PC: Facebook

ಅಭಿಷೇಕ್ ಬಾಡ್ಕರ್|ಸ್ಪೋರ್ಟ್ಸ್ ಸೀಮ್

ಬೆಂಗಳೂರು, ಜನವರಿ 7: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಆ ಹುಡುಗ ಕ್ರಿಕೆಟ್ ಆಟಗಾರನಾಗುವ ಕನಸು ಕಂಡಿದ್ದ. ಇದಕ್ಕಾಗಿ ಆತ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಟ್ಟೆಗೆ ಹಿಟ್ಟಿಲ್ಲದೆ ಬರೀ ನೀರು ಕುಡಿದು ದಿನಗಳನ್ನು ಕಳೆದ. ಮಲಗಲು ಸೂರಿಲ್ಲದೆ ಸ್ಮಶಾನದಲ್ಲಿ ಮಲಗಿದ. ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ ಮೇಲೂ ಕ್ರಿಕೆಟ್ ಆಟಗಾರನಾಗುವ ಆತನ ಕನಸು ನನಸಾಯಿತೇ? ಖಂಡಿತಾ ಇಲ್ಲ. ಏಕೆಂದರೆ ವಿಧಿಲಿಖಿತ ಬೇರೆಯದ್ದೇ ಆಗಿತ್ತು.

ಕ್ರಿಕೆಟಿಗನಾಗಬೇಕೆಂದು ಕನಸು ಕಂಡದ್ದ ಆ ಹುಡುಗ ಕ್ರಿಕೆಟ್ ಆಟಗಾರರ ಪಾಲಿಗೆ ದ್ರೋಣಾಚಾರ್ಯನಾದ. ಕ್ರಿಕೆಟ್ ಜಗತ್ತಿನ ಸಾಮ್ರಾಟ ವಿರಾಟ್ ಕೊಹ್ಲಿ ಸಹಿತ ಭಾರತ ಕ್ರಿಕೆಟ್ ತಂಡದ ಆಟಗಾರರ ಯಶಸ್ಸಿನ ಹಿಂದಿನ ಶಕ್ತಿಯಾಗಿ, ಭಾರತ ತಂಡದ ಯಶಸ್ಸಿಗೆ ತನ್ನ ಸರ್ವಸ್ವವನ್ನೂ ಅರ್ಪಿಸಿ ಹಗಲಿರುಳೂ ದುಡಿಯುತ್ತಿರುವ ರಾಘವೇಂದ್ರ ಡಿವಿಜಿಐ ಎಂಬ ಅಸಾಮಾನ್ಯ ವ್ಯಕ್ತಿಯ ಬದುಕಿನ ಕಥೆಯಿದು. ರಾಘವೇಂದ್ರ ಅವರ ಕಥೆಯನ್ನು ಕೇಳಿದರೆ ಎಂಥವರಿಗೂ ರೋಮಾಂಚನವಾಗುತ್ತದೆ. ಏಕೆಂದರೆ ಯಾವ ಸಿನಿಮಾಗೂ ಕಮ್ಮಿಯಿಲ್ಲದ ಅವರ ಜೀವನಗಾಥೆ ಅಷ್ಟೊಂದು ರೋಚಕವಾಗಿದೆ.

ರಾಘವೇಂದ್ರ. ಕ್ರಿಕೆಟ್ ವಲಯದಲ್ಲಿ ರಘು ಎಂದೇ ಹೆಸರುವಾಸಿ. ಭಾರತ ಕ್ರಿಕೆಟ್ ತಂಡದ ಥ್ರೋಡೌನ್ ಪರಿಣತನಾಗಿರುವ ರಾಘವೇಂದ್ರ, ಆಟಗಾರರ ಅಭ್ಯಾಸದ ಸಂದರ್ಭದಲ್ಲಿ ಗಂಟೆಗೆ 150 ಕಿ.ಮೀ.ಗೂ ವೇಗದಲ್ಲಿ ಸೈಡ್‌ಆರ್ಮ್ ಸಾಧನದ ಮೂಲಕ ಚೆಂಡೆಸೆಯುತ್ತಾ ವಿದೇಶಿ ನೆಲಗಳಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಯಶಸ್ಸಿಗೆ ಕಾರಣರಾಗಿದ್ದಾರೆ. ಈಗಷ್ಷೇ ಟೀಮ್ ಇಂಡಿಯಾ 71 ವರ್ಷಗಳಲ್ಲಿ ಇದೇ ಮೊದಲ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡದೆ. ಈ ಮಹಾನ್ ಗೆಲುವಿನಲ್ಲಿ ರಾಘವೇಂದ್ರ ಅವರ ಕೊಡುಗೆ ಅನನ್ಯ, ಅಪಾರ.ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಟ್ರೈನಿಂಗ್ ಅಸಿಸ್ಟೆಂಟ್ ಆಗಿದ್ದ ರಘು, ಇಂದು ಟೀಮ್ ಇಂಡಿಯಾದ ಅವಿಭಾಜ್ಯ ಅಂಗ. ಈ ಹಂತ ತಲುಪಬೇಕಾದರೆ ರಘು ಬೆವರನ್ನಲ್ಲ, ರಕ್ತವನ್ನೇ ಸುರಿಸಿದ್ದಾರೆ. ಅವರ ಬೆನ್ನ ಹಿಂದೆ ದೊಡ್ಡ ಕಥೆಯೇ ಇದೆ.

ರಮಾಕಾಂತ್ ಅಚ್ರೇಕರ್ ಕ್ರಿಕೆಟ್ ಗುರು

ರಾಘವೇಂದ್ರ ಅವರ ತಂದೆ ನಿವೃತ್ತ ಶಾಲಾ ಶಿಕ್ಷಕ. ಬಾಲ್ಯದಿಂದಲೇ ರಘು ಕ್ರಿಕೆಟ್‌ನತ್ತ ಒಲವು ಬೆಳೆಸಿಕೊಂಡಿದ್ದರು. ಆದರೆ ಅವರ ತಂದೆಗೆ ಮಗನ ಕ್ರಿಕೆಟ್ ಪ್ರೀತಿ ಇಷ್ಟವಾಗುತ್ತಿರಲಿಲ್ಲ. ಆದರೆ ರಘು ಅವರಿಗೆ ಕ್ರಿಕೆಟ್ ಅಂದರೆ ದೇವರು. ಮುಂಬೈನಲ್ಲಿರುವ ಸಂಬಂಕರ ಮನೆಗೆ ಹೋಗಿದ್ದಾಗ ಸಚಿನ್ ತೆಂಡೂಲ್ಕರ್ ಅವರ ಗುರು ದಿವಂಗತ ರಮಾಕಾಂತ್ ಅಚ್ರೇಕರ್ ಅವರಿಂದ ಕ್ರಿಕೆಟ್ ಪಾಠಗಳನ್ನು ಕಲಿತು ಬಂದ ರಘು ಕ್ರಿಕೆಟ್‌ನಲ್ಲೇ ಬದುಕು ಕಟ್ಟಿಕೊಳ್ಳಲು ಮುಂದಾದಾಗ ತಂದೆಗೆ ಇದು ಪಥ್ಯವಾಗಲಿಲ್ಲ. ಕೈಯಲ್ಲಿ ಕೇವಲ 21 ರೂಪಾಯಿಗಳನ್ನು ಹಿಡಿದುಕೊಂಡು ಮನೆ ಬಿಟ್ಟ ರಘು, ಕುಮಟಾದಿಂದ ಹುಬ್ಬಳ್ಳಿಗೆ ಬಂದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯದ ಆಯ್ಕೆ ಟ್ರಯಲ್ಸ್‌ಗೆ ಹೋದ ರಘುವಿಗೆ ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯಿರಲಿಲ್ಲ. ಕ್ರಿಕೆಟ್‌ಗಾಗಿ ಮನೆ ಬಿಟ್ಟು ಬಂದಾಗಿದೆ. ಮತ್ತೆ ಮನೆಗೆ ಹೋಗುವಂತಿಲ್ಲ. ಮನೆಗೆ ಹೋದರೆ ಕ್ರಿಕೆಟ್ ಅನ್ನು ಮರೆತು ಬಿಡಬೇಕು. ದೃಢ ನಿಶ್ಚಯ ಮಾಡಿದ ರಘು 15 ದಿನ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲೇ ಮಲಗಿದರು. ತಿನ್ನಲು ಅನ್ನವಿಲ್ಲ. ಮತ್ತೊಂದೆಡೆ ಪೊಲೀಸರಿಂದ ತೊಂದರೆ. ಹೀಗಾಗಿ ಅಲ್ಲಿನ ಕೆಐಎಂ ಮೆಡಿಕಲ್ ಕಾಲೇಜು ಬಳಿಯಿರುವ ಹನುಮಾನ್ ದೇವಾಲಯದ ಆವರಣವೇ ರಘುವಿಗೆ ಆಶ್ರಯತಾಣವಾಯಿತು. ಆದರೆ ಸ್ವಲ್ಪ ದಿನ ಮಾತ್ರ. ಅಲ್ಲಿದ್ದ ಜನರು ರಘು ಅವರನ್ನು ಅಲ್ಲಿಂದಲೂ ಓಡಿಸಿದರು.

ನಾಲ್ಕೂವರೆ ವರ್ಷ ಸ್ಮಶಾನದಲ್ಲಿ ವಾಸ

ಹನುಮಾನ್ ದೇವಾಲಯದಲ್ಲೂ ಉಳಿಯಲು ಜನ ಬಿಡಲಿಲ್ಲ. ಬೇರೆ ದಾರಿ ಕಾಣದ ರಘು ಅವರ ಮುಂದಿದ್ದ ಆಯ್ಕೆ ಒಂದೇ. ಅದು ಸ್ಮಶಾನ. ಹೌದು. ಹುಬ್ಬಳ್ಳಿಯ ಈಗಿನ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಮೈದಾನದ ಬಳಿಯಿರುವ ಸ್ಮಶಾನವೇ ರಘು ಅವರಿಗೆ ಮನೆಯಾಯಿತು. ನಾಲ್ಕೂವರೆ ವರ್ಷಗಳ ಕಾಲ ರಘು ಸ್ಮಶಾನದಲ್ಲೇ ಮಲಗಿದರು. ಹಗಲು ಹೊತ್ತು ಕ್ರಿಕೆಟ್. ರಾತ್ರಿ ಸ್ಮಶಾನದಲ್ಲಿ ವಾಸ. ಚಳಿಗಾಲದಲ್ಲಿ ಕ್ರಿಕೆಟ್ ಮ್ಯಾಟ್ ಹೊದಿಕೆಯಾಯಿತು. ಸ್ಮಶಾನದಲ್ಲಿ ವಾಸವಾಗಿದ್ದಾಗ ರಘುವಿಗೆ ಜೊತೆಗಾರನಾಗಿದ್ದದ್ದು ದೈತ್ಯಾಕಾರದ ಹಾವು. ಹೌದು. ಸ್ಮಶಾನದಲ್ಲಿ ವಾಸವಾಗಿದ್ದ ದಿನಗಳಲ್ಲಿ ಹಾವೊಂದು ರಘು ಅವರ ಆಸುಪಾಸಿನಲ್ಲೇ ಓಡಾಡುತ್ತಿತ್ತು.

PC: Facebook

ಧಾರವಾಡ ವಲಯ ತಂಡದ ಪರ ಒಂದು ಬಾರಿ 4 ವಿಕೆಟ್‌ಗಳನ್ನು ಪಡೆದ ಆಫ್ ಸ್ಪಿನ್ನರ್ ರಘು ಅವರಿಗೆ ನಂತರ ಕೆಎಲ್‌ಇ ಸೊಸೈಟಿ ಉಳಿದುಕೊಳ್ಳಲು ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿತು. ಇನ್ನೇನು ಕ್ರಿಕೆಟಿಗನಾಗುವ ಕನಸಿಗೆ ಬಲ ಬಂತು ಎನ್ನುವಷ್ಟರಲ್ಲಿ ವಿಧಿಯ ಆಟ ಬೇರೆಯದ್ದೇ ಆಗಿತ್ತು. ಮೆಟ್ಟಿಲುಗಳನ್ನು ಹತ್ತುವ ಸಂದರ್ಭದಲ್ಲಿ ಜಾರಿ ಬಿದ್ದ ರಘು ಅವರ ಬಲಗೈಗೆ ಮುಂದೆಂದೂ ಬೌಲಿಂಗ್ ಮಾಡಲು ಸಾಧ್ಯವಾಗದಷ್ಟರ ಮಟ್ಟಿಗೆ ಗಂಭೀರ ಗಾಯವಾಯಿತು. ಅದುವರೆಗೆ ಪಟ್ಟ ಕಷ್ಟ, ಕಂಡ ಕನಸು ಕೆಲವೇ ಕ್ಷಣಗಳಲ್ಲಿ ನುಚ್ಚು ನೂರಾಯಿತು.

ಕಮರಿತು ಕ್ರಿಕೆಟ್ ಕನಸು, ಮೂಡಿತು ಹೊಸ ಬೆಳಕು

ಕ್ರಿಕೆಟಿಗನಾಗಿರುವ ಕನಸು ಕಮರಿದಾಗ ರಘು ಅವರ ಜೀವನದಲ್ಲಿ ಕತ್ತಲು ಕವಿದ ಅನುಭವ. ಆದರೆ ಇಲ್ಲಿ ಕತ್ತಲು ಆವರಿಸಿದರೆ ಎಲ್ಲೋ ಬೆಳಕು ಮೂಡಿದೆ ಎಂದರ್ಥ. ರಾಘವೇಂದ್ರ ಅವರ ಜೀವನದಲ್ಲಿ ಈ ಮಾತು ನಿಜವಾಯಿತು. ಕ್ರಿಕೆಟಿಗನಾಗುವ ಆಸೆಯನ್ನು ಕೈಬಿಟ್ಟು, ಕೋಚಿಂಗ್‌ನತ್ತ ಗಮನ ಹರಿಸಿದರು ರಘು. ಆದರೆ ಮುಂದೊಂದು ದಿನ ತಾವು ಭಾರತ ತಂಡವನ್ನು ಸೇರುವ ಮಟ್ಟಿಗೆ ಬೆಳೆದು ನಿಲ್ಲುತ್ತೇನೆ ಎಂಬ ಕಲ್ಪನೆಯೂ ಅವರಿಗಿರಲಿಲ್ಲ. ಮುಂದೇನು ಎಂಬ ಸ್ಪಷ್ಟತೆ ಇಲ್ಲದೆ ಹಲವಾರು ಕೋಚ್‌ಗಳ ಗರಡಿಯಲ್ಲಿ ಕೋಚಿಂಗ್‌ನ ಪಟ್ಟುಗಳನ್ನು ಕಲಿಯಲಾರಂಭಿಸಿದರು.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಯಣ

ಹಣೆಬರಹ ರಘು ಅವರನ್ನು ಬೆಂಗಳೂರಿಗೆ ಕರೆ ತಂದಿತು. ಬೆಂಗಳೂರಿನ ಕೆಐಒಸಿ ಅಕಾಡೆಮಿಯಲ್ಲಿ ಕ್ರಿಕೆಟಿಗರಿಗೆ ಸಹಾಯ ಮಾಡುತ್ತಿದ್ದ ರಘು ನಂತರ ರಾಜ್ಯದ ಮಾಜಿ ಕ್ರಿಕೆಟಿಗರೊಬ್ಬರ ಕಣ್ಣಿಗೆ ಬಿದ್ದರು. ಹುಡುಗನಲ್ಲಿದ್ದ ಕ್ರಿಕೆಟ್ ಪ್ರೀತಿಯನ್ನು ಗುರುತಿಸಿದ ಅವರು, ರಾಜ್ಯ ರಣಜಿ ತಂಡದೊಂದಿಗೆ ಕೆಲಸ ಮಾಡುವಂತೆ ರಘು ಅವರಿಗೆ ಸೂಚಿಸಿ ಕೆಎಸ್‌ಸಿಎಗೆ ಕರೆ ತಂದರು. ಕರ್ನಾಟಕ ತಂಡದೊಂದಿಗೆ ಕೋಚ್‌ಗಳಿಗೆ ಸಹಾಯಕನಾಗಿ ಆಟಗಾರರ ಅಭ್ಯಾಸಕ್ಕೆ ನೆರವಾಗುವುದು ರಘು ಅವರ ಕಾಯಕವಾಗಿತ್ತು. ಆದರೆ ಅದು ವೇತನ ರಹಿತ ಕೆಲಸ. ಆದರೆ ಊಟ ಮಾಡಲು ದುಡ್ಡಿಲ್ಲದ ಸಂದರ್ಭದಲ್ಲೂ ಸ್ವಾಭಿಮಾನಿ ರಘು ಯಾರತ್ತಲೂ ಕೈಚಾಚಲಿಲ್ಲ. ಕೈಯಲ್ಲಿ ದುಡ್ಡಿದ್ದಾಗ ಬಾಳೆ ಹಣ್ಣೇ ಆಹಾರ. ರಣಜಿ ಆಟಗಾರರು ಹಣ, ಊಟದ ನೆರವಿನ ಹಸ್ತ ನೀಡಲು ಮುಂದಾದರೂ ಒಂದು ಪೈಸೆ ದುಡ್ಡನ್ನು ಮುಟ್ಟಲಿಲ್ಲ. ಇದರ ಪರಿಣಾಮ 10 ದಿನಗಳ ಕಾಲ ಊಟವಿಲ್ಲದೆ ಬರೀ ನೀರು ಕುಡಿದು ಮಲಗುವಂತಾಯಿತು.

KSCA to ಎನ್‌ಸಿಎ

ಕರ್ನಾಟಕ ತಂಡದೊಂದಿಗೆ ಕೆಲ ಮಾಡುವಾಗ ರಘು ಅವರ ಪರಿಶ್ರಮ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಂಟಿಕೊಂಡೇ ಇರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯ ಅಕಾರಿಯೊಬ್ಬರ ಕಣ್ಣಿಗೆ ಬಿತ್ತು. 2 ವರ್ಷ ರಣಜಿ ತಂಡದೊಂದಿಗೆ ದುಡಿದ ರಘು ವೇತನ ರಹಿತ ಉದ್ಯೋಗಿಯಾಗಿ ಎನ್‌ಸಿಎ ಸೇರಿಕೊಂಡರು. ಅಲ್ಲಿ ಎನ್‌ಸಿಎ ಕೋಚ್‌ಗಳಿಗೆ ನೆರವಾಗುವುದು ರಘು ಅವರ ಕೆಲಸವಾಗಿತ್ತು. ಭಾರತ ತಂಡದ ಆಟಗಾರರು ಎನ್‌ಸಿಎಗೆ ಆಗಮಿಸಿದಾಗ ಅವರ ಅಭ್ಯಾಸಕ್ಕೆ ನೆರವಾಗುತ್ತಾ ತಮ್ಮ ಕೆಲಸವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದರು ರಘು. ಎನ್‌ಸಿಎಗೆ ಬರುವ ಕ್ರಿಕೆಟಿಗರು ಮಧ್ಯರಾತ್ರಿ ಅಭ್ಯಾಸಕ್ಕೆ ಕರೆದರೂ ರಘು ಹಾಜರ್. ಹೀಗೆ 5 ವರ್ಷಗಳು ಕಳೆದವು. ರಾಘವೇಂದ್ರ ಅವರ ನಿಸ್ವಾರ್ಥ ಸೇವೆಗೆ 2008ರಲ್ಲಿ ಫಲ ಸಿಕ್ಕಿತು. ಆ ವರ್ಷ ರಘು ಎನ್‌ಸಿಎನಲ್ಲಿ ಬಿಸಿಸಿಐನ ಉದ್ಯೋಗಿಯಾಗಿ ನೇಮಕಗೊಂಡರು. ಟೀಮ್ ಇಂಡಿಯಾ ಆಟಗಾರರು ಅಭ್ಯಾಸಕ್ಕಾಗಿ ಎನ್‌ಸಿಎಗೆ ಆಗಮಿಸಿದರೆ ಹುಡುಕಾಡುತ್ತಿದ್ದ ಮೊದಲ ವ್ಯಕ್ತಿಯೇ ರಘು. ಏಕೆಂದರೆ ಆಟಗಾರರಿಗೆ ರಘು ಅಷ್ಟರ ಮಟ್ಟಿಗೆ ಆತ್ಮೀಯರಾಗಿದ್ದರು, ಕೆಲಸದ ಬಗ್ಗೆ ಬದ್ಧತೆಯುಳ್ಳ ವ್ಯಕ್ತಿಯಾಗಿದ್ದರು. ಅಷ್ಟೇ ಅಲ್ಲದೆ, ಅಭ್ಯಾಸದ ಸಂದರ್ಭಗಳಲ್ಲಿ ರಘು ನೀಡುವ ಸಲಹೆಗಳು ಅತ್ಯಂತ ಪರಿಣಾಮಕಾರಿಯಾಗಿರುತ್ತಿದ್ದವು.

ರಾಘವೇಂದ್ರ ಅವರಿಗೆ ಪರಿಶ್ರಮವೇ ಬಂಡವಾಳ. ಇದು ಅವರನ್ನು ಭಾರತ ಕ್ರಿಕೆಟ್ ತಂಡಕ್ಕೆ ಸೇರುವಂತೆ ಮಾಡಿತು. 2011ರಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ತಂಡದ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ರಘು ನೇಮಕಗೊಂಡರು. ಅಂದಿನಿಂದ ಇಂದಿನವರೆಗೆ ಕುಮಟಾ ಹುಡುಗ ರಘು ಟೀಮ್ ಇಂಡಿಯಾದ ಅವಿಭಾಜ್ಯಅಂಗವಾಗಿದ್ದಾರೆ. ಭಾರತ ತಂಡಕ್ಕೆ ರಘು ಅವರ ಕೊಡುಗೆ ಏನು ಎಂಬುದನ್ನು ನಾಯಕ ವಿರಾಟ್ ಕೊಹ್ಲಿ ಸಹಿತ ಹಲವಾರು ಆಟಗಾರರೇ ಹೇಳಿದ್ದಾರೆ.

ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಅವರಿಂದ ಹಿಡಿದು ಈಗಿನ ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗೆ ರಘು ಅಭ್ಯಾಸಕ್ಕೆ ನೆರವಾಗಿದ್ದಾರೆ, ನೆರವಾಗುತ್ತಿದ್ದಾರೆ. ಕುಮಟಾದಿಂದ ಟೀಮ್ ಇಂಡಿಯಾವರೆಗಿನ ಅವರ ಸಾಹಸಗಾಥೆ, ಯಶೋಗಾಥೆ ಯಾವ ಸಿನಿಮಾ ಕಥೆಗೂ ಕಮ್ಮಿಯಿಲ್ಲ.

ತೆರೆಯ ಮೇಲೆ ನಮ್ಮ ಸಾಧನೆಗಳ ಮುಂದೆ ತೆರೆಯ ಹಿಂದಿನವರ ಶ್ರಮ ಕೆಲವೊಮ್ಮೆ ಬೆಳಕಿಗೆ ಬರುವುದೇ ಇಲ್ಲ. ನನ್ನ ಯಶಸ್ಸಿನಲ್ಲಿ ರಾಘವೇಂದ್ರ ಅವರ ಕೊಡುಗೆ ತುಂಬಾ ದೊಡ್ಡದು. ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ಅವರು ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡು ಎಸೆಯುತ್ತಾರೆ. ಅವರ ಎಸೆತಗಳನ್ನು ಎದುರಿಸುವ ನಮಗೆ ಪಂದ್ಯಗಳಲ್ಲಿ 140-145 ವೇಗದ ಎಸೆತಗಳು ಮಧ್ಯಮ ವೇಗದ ಬೌಲಿಂಗ್ ರೀತಿಯಲ್ಲಿ ಕಾಣುತ್ತದೆ. ಕಳೆದ 3-4 ವರ್ಷಗಳಲ್ಲಿ ರಾಘವೇಂದ್ರ ಅವರೊಂದಿಗಿನ ಅಭ್ಯಾಸ ನನಗಂತೂ ತುಂಬಾ ಸಹಕಾರಿಯಾಗಿದೆ.

– ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ

ನಾನು ಮೊದಲ ಬಾರಿ ರಘು ಅವರನ್ನು ನೋಡಿದ್ದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ. ಅಲ್ಲಿ ಅವನು ಎಲ್ಲವೂ ಆಗಿದ್ದ. ನಮ್ಮ ಅಭ್ಯಾಸಕ್ಕೆ ನೆರವಾಗುವುದು, ಥ್ರೋಡೌನ್, ನೆಟ್ ಸೆಟ್ ಮಾಡುವ ಕೆಲಸ ಮಾಡುತ್ತಿದ್ದ. ಜಗತ್ತಿನ ಎಲ್ಲಾ ಕ್ರಿಕೆಟಿಗರಿಗಿಂತಲೂ ಕ್ರಿಕೆಟ್ ಕಡೆಗೆ ಬದ್ಧತೆ ಇರುವ ವ್ಯಕ್ತಿ. ಥ್ರೊಡೌನ್‌ನಲ್ಲಿ ಬೌನ್ಸರ್ ಹಾಕು ಅಂದ್ರೆ, ಯಾರ್ಕರ್ ಹಾಕುತ್ತಾನೆ. ಯಾರ್ಕರ್ ಹಾಕು ಅಂದ್ರೆ ಬೌನ್ಸರ್ ಹಾಕುತ್ತಾನೆ. ಅವರ ಥ್ರೋಡೌನ್ ಎಸೆತಗಳನ್ನು ಎದುರಿಸುವುದೇ ದೊಡ್ಡ ಸವಾಲು.

– ಯುವರಾಜ್ ಸಿಂಗ್, ಭಾರತ ಕ್ರಿಕೆಟ್ ತಂಡದ ಆಟಗಾರ

2005ರಲ್ಲಿ ಬೆಂಗಳೂರಿನಲ್ಲಿ ಭಾರತ ತಂಡದ ತರಬೇತಿ ಶಿಬಿರ ನಡೆಯುತ್ತಿತ್ತು. ಕೆಎಸ್‌ಸಿಎ ಬಿ ಗ್ರೌಂಡ್‌ನಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಒಬ್ಬ ಥ್ರೋಡೌನ್ ಮಾಡುತ್ತಿದ್ದ. ಯಾರೋ ಹುಡುಗ ಥ್ರೋಡೌನ್ ಮಾಡುತ್ತಿದ್ದಾನೆ ಅಂದುಕೊಂಡೆವು. ಅದ್ಭುತ ವ್ಯಕ್ತಿ. ಕಳೆದ ಕೆಲ ವರ್ಷಗಳಿಂದ ಭಾರತ ತಂಡಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅವರ ವಿಶೇಷತೆ ಎಂದರೆ ಅವರಿಗೆ ಇಲ್ಲ ಎಂಬ ಪದದ ಅರ್ಥವೇ ಗೊತ್ತಿಲ್ಲ. ನಮಗೆ ಯಾವುದೇ ಸಂದರ್ಭದಲ್ಲಿ ಥ್ರೋಡೌನ್ ಬೇಕು ಅಂದರೆ ಅವರು ಎಂತಹ ಸನ್ನಿವೇಶದಲ್ಲಿದ್ದರೂ ಅದಕ್ಕೆ ಸಿದ್ಧ. ಅತ್ಯಂತ ವಿನಮ್ರ ವ್ಯಕ್ತಿ. ಯಾವಾಗಲೂ ಟೀಮ್ ಇಂಡಿಯಾಕ್ಕಾಗಿ ಏನಾದರೂ ವಿಶೇಷವಾದದ್ದನ್ನು ಮಾಡಬೇಕೆಂದು ಯೋಚಿಸುತ್ತಲೇ ಇರುತ್ತಾರೆ.

– ಸುರೇಶ್ ರೈನಾ, ಭಾರತ ಕ್ರಿಕೆಟ್ ತಂಡದ ಆಟಗಾರ.

PC: Twitter

ಎನ್‌ಸಿಎನಲ್ಲಿ ಮೊದಲ ಬಾರಿ ರಘು ಅವರನ್ನು ನೋಡಿದ್ದೆ. ನಮ್ಮೆಲ್ಲರಿಗಿಂತ ಹೆಚ್ಚು ಪರಿಶ್ರಮ, ಕಷ್ಟ ಪಡುತ್ತಾರೆ. ಅತ್ಯಂತ ಒಳ್ಳೆಯ ಸಂಗತಿ ಎಂದರೆ ನಮಗೆಲ್ಲಾ ಅವರು ನೆಟ್ಸ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ಬ್ಯಾಟಿಂಗ್ ಅಭ್ಯಾಸ ಮಾಡಿಸುತ್ತಾರೆ. ನೆಟ್ಸ್‌ನಲ್ಲಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡೆಸೆಯುತ್ತಾರೆ. ಅವರ ಎಸೆತಗಳನ್ನು ಎದುರಿಸಲು ಭಯವಾಗುತ್ತದೆ. ಅವರ ವೇಗದ ಎಸೆತಗಳನ್ನು ಎದುರಿಸಿದ ನಂತರ ನಮಗೆ ನಮ್ಮ ಮೇಲೆ ನಂಬಿಕೆ, ಆತ್ಮವಿಶ್ವಾಸ ಮೂಡಿದೆ. ಅವರ ಎಸೆತಕ್ಕೆ ಬೌಂಡರಿ ಅಥವಾ ಸಿಕ್ಸರ್ ಬಾರಿಸಿದರೆ ಮುಂದಿನ ಎಸೆತ ಪಕ್ಕಾ ಬೌನ್ಸರ್ ಆಗಿರುತ್ತದೆ.

ಶಿಖರ್ ಧವನ್, ಭಾರತ ಕ್ರಿಕೆಟ್ ತಂಡದ ಆಟಗಾರ.

ನಾವು ಎನ್‌ಸಿಎಗೆ ಅಂಡರ್-19 ಕ್ಯಾಂಪ್‌ಗೆ ಬಂದಿದ್ದಾಗ ರಘು ಅವರನ್ನು ಮೊದಲ ಬಾರಿ ನೋಡಿದ್ದೆ. ನಂತರ ಅವರು ಭಾರತ ತಂಡವನ್ನು ಸೇರಿಕೊಂಡ ನಂತರ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೆ ಅವರಿಂದ ಸಾಕಷ್ಟು ಪ್ರಯೋಜನ ಸಿಕ್ಕಿದೆ. ಪ್ರತಿ ಬ್ಯಾಟ್ಸ್‌ಮನ್‌ಗೆ ಪರಿಪೂರ್ಣ ಅಭ್ಯಾಸ ತುಂಬಾ ಮುಖ್ಯ. ಅಂತಹ ಅಭ್ಯಾಸ ರಘು ಅವರಿಂದ ನಮಗೆ ಸಿಗುತ್ತಿದೆ.

ರೋಹಿತ್ ಶರ್ಮಾ, ಭಾರತ ಕ್ರಿಕೆಟ್ ತಂಡದ ಆಟಗಾರ.

PC: Facebook

ಅವರು ಕೆಲಸ ಮಾಡುವ ರೀತಿ ನಮಗೆಲ್ಲರಿಗೂ ಮಾದರಿ. ನೆಟ್ಸ್‌ನಲ್ಲಿ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೆ ಗುಣಮಟ್ಟದ ಅಭ್ಯಾಸ ಅವರಿಂದಾಗಿ ಸಿಗುತ್ತಿದೆ. ಇನ್ನೂ ಉತ್ತಮವಾಗಿ ಆಡುವಂತೆ ನಮಗೆಲ್ಲಾ ಸೂರ್ತಿ ತುಂಬುತ್ತಾರೆ.

ಅಜಿಂಕ್ಯ ರಹಾನೆ, ಭಾರತ ಕ್ರಿಕೆಟ್ ತಂಡದ ಆಟಗಾರ.

LEAVE A REPLY

Please enter your comment!
Please enter your name here

20 − 15 =