ರಣಜಿ ಟ್ರೋಫಿ: ಬರೋಡ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಪ್ರಸಿದ್ಧ್ ಕೃಷ್ಣ ವಾಪಸ್

0
PC: Prasidh Krishna/Facebook

ಬೆಂಗಳೂರು, ಫೆಬ್ರವರಿ 10: ರಣಜಿ ಟ್ರೋಫಿ ಲೀಗ್ ಹಣಾಹಣಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಬರೋಡ ತಂಡವನ್ನು ಎದುರಿಸಲಿದೆ. ಈ ಪಂದ್ಯ ಕರ್ನಾಟಕಕ್ಕೆ ಮಾಡು ಇಲ್ಲ ಮಡಿ ಪಂದ್ಯವಾಗಿದೆ.

ಬರೋಡ ವಿರುದ್ಧದ ಪಂದ್ಯಕ್ಕೆ ಯುವ ಬಲಗೈ ವೇಗದ ಬೌಲರ್ ಎಂ.ಪ್ರಸಿದ್ಧ್ ಕೃಷ್ಣ ತಂಡಕ್ಕೆ ಮರಳಿದ್ದಾರೆ. ಕಳೆದ ವರ್ಷದ ಅಕ್ಟೋಬರ್ 20ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪುದುಚೇರಿ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಪ್ರಸಿದ್ಧ್ ಕೃಷ್ಣ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಹಾಗೂ ರಣಜಿ ಟ್ರೋಫಿ ಟೂರ್ನಿಯ ಮೊದಲ ಏಳು ಲೀಗ್ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಪ್ರಸಿದ್ಧ್ ಕೃಷ್ಣ ಮೂರೂವರೆ ತಿಂಗಳ ನಂತರ ತಂಡಕ್ಕೆ ವಾಪಸ್ ಆಗಿರುವುದು ಕರ್ನಾಟಕದ ಬೌಲಿಂಗ್ ಬಲವನ್ನು ಹೆಚ್ಚಿಸಿದೆ.

ಮಧ್ಯಮ ಕ್ರಮಾಂಕದ ಅನುಭವಿ ಎಡಗೈ ಬ್ಯಾಟ್ಸಮನ್ ಪವನ್ ದೇಶಪಾಂಡೆ ತಂಡಕ್ಕೆ ಮರಳಿದ್ದು, ರೋಹನ್ ಕದಂ ಅವರನ್ನು ತಂಡದಿಂದ ಕೈಬಿಡಲಾಗಿದೆ. ತಂಡದ ನಾಯಕರಾಗಿ ಕರುಣ್ ನಾಯರ್ ಮುಂದುವರಿದಿದ್ದು, ಉಪನಾಯಕನಾಗಿ ಶ್ರೇಯಸ್ ಗೋಪಾಲ್ ಬದಲು ಆರ್.ಸಮರ್ಥ್ ನೇಮಕವಾಗಿದ್ದಾರೆ.

ಎಲೈಟ್ ‘ಎ’ ಹಾಗೂ ‘ಬಿ’ ಕ್ರಾಸ್ ಪೂಲ್’ನಲ್ಲಿ ಕರ್ನಾಟಕ ತಂಡ ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು ಹಾಗೂ 4 ಡ್ರಾಗಳೊಂದಿಗೆ 25 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ‘ಎ’ ಹಾಗೂ ‘ಬಿ’ ಕ್ರಾಸ್ ಪೂಲ್’ನಲ್ಲಿ ಅಗ್ರ 5 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್’ಗೆ ಅರ್ಹತೆ ಪಡೆಯಲಿವೆ.

ಗುಜರಾತ್ 29 ಅಂಕ, ಸೌರಾಷ್ಟ್ರ 28 ಅಂಕ, ಆಂಧ್ರ 27 ಅಂಕ, ಬಂಗಾಳ 26 ಅಂಕ, ಕರ್ನಾಟಕ 25 ಅಂಕ ಸಂಪಾದಿಸಿ ಮೊದಲ ಐದು ಸ್ಥಾನಗಳಲ್ಲಿವೆ. 24 ಅಂಕ ಗಳಿಸಿರುವ ಪಂಜಾಬ್ 6ನೇ ಸ್ಥಾನದಲ್ಲಿದ್ದರೆ, 20 ಅಂಕಗಳೊಂದಿಗೆ ಉತ್ತರ ಪ್ರದೇಶ 7 ಹಾಗೂ 19 ಅಂಕಗಳೊಂದಿಗೆ ತಮಿಳುನಾಡು 8ನೇ ಸ್ಥಾನದಲ್ಲಿದೆ. ಕರ್ನಾಟಕ ತಂಡ ಮಧ್ಯಪ್ರದೇಶ ವಿರುದ್ಧ ಸೋತು, ಪಂಜಾಬ್, ಉತ್ತರ ಪ್ರದೇಶ ಹಾಗೂ ತಮಿಳುನಾಡು ತಂಡಗಳಲ್ಲಿ ಒಂದು ತಂಡ ಗೆದ್ದರೂ ರಾಜ್ಯ ತಂಡದ ಕ್ವಾರ್ಟರ್ ಫೈನಲ್ ಕನಸು ನುಚ್ಚುನೂರಾಗಲಿದೆ.

ಬರೋಡ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ: ಕರುಣ್ ನಾಯರ್(ನಾಯಕ), ಆರ್.ಸಮರ್ಥ್(ಉಪನಾಯಕ), ದೇವದತ್ ಪಡಿಕ್ಕಲ್, ಡಿ.ನಿಶ್ಚಲ್, ಪವನ್ ದೇಶಪಾಂಡೆ, ಸಿದ್ಧಾರ್ಥ್ ಕೆ.ವಿ., ಶರತ್ ಶ್ರೀನಿವಾಸ್(ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೆ.ಗೌತಮ್, ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ, ಪ್ರವೀಣ್ ದುಬೆ, ವಿ.ಕೌಶಿಕ್, ರೋನಿತ್ ಮೋರೆ, ಶರತ್ ಬಿ.ಆರ್(ವಿಕೆಟ್ ಕೀಪರ್).

LEAVE A REPLY

Please enter your comment!
Please enter your name here

8 − 5 =