ರಣಜಿ ಟ್ರೋಫಿ: ಕರ್ನಾಟಕದ ಸೋಲಿಗೆ ಕಾರಣವಾದ ತೆರೆಯ ಹಿಂದಿನ ಸತ್ಯ..!

0

ಬೆಂಗಳೂರು, ಮಾರ್ಚ್ 03: ಕರ್ನಾಟಕ ತಂಡದ ರಣಜಿ ಟ್ರೋಫಿ ಅಭಿಯಾನ ಸತತ ಮೂರನೇ ಸೆಮಿಫೈನಲ್ ಸೋಲಿನೊಂದಿಗೆ ಅಂತ್ಯಗೊಂಡಿದೆ. ಬಂಗಾಳ ವಿರುದ್ಧ ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಸೋಲು ಕಂಡಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕಕ್ಕೆ ಎದುರಾದ ಸತತ 3ನೇ ಸೆಮಿಫೈನಲ್ ಶಾಕ್.
ಹಿಂದಿನ ಎರಡು ವರ್ಷಗಳ ವೈಫಲ್ಯಗಳನ್ನು ಮರೆತು ಬಿಡೋಣ. ಈ ಬಾರಿ ಕರ್ನಾಟಕದ ಸೋಲಿಗೆ ಕಾರಣ ಯಾರು ಎಂಬುದನ್ನು ನೋಡಿದರೆ ಮೊದಲು ಎದ್ದು ಕಾಣುವ ಹೆಸರು ನಾಯಕ ಕರುಣ್ ನಾಯರ್. ಮತ್ತೊಂದು ಹೆಸರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ, ಕರುಣ್ ನಾಯರ್ ಅವರ ಪಾಲಿನ ಕ್ರಿಕೆಟ್ “ಗಾಡ್ ಫಾದರ್”. ರಣಜಿ ಟ್ರೋಫಿಯಲ್ಲಿ ಕರ್ನಾಟಕದ ವೈಫಲ್ಯಕ್ಕೆ ಕಾರಣರಾದವರು ಇವರೇ ಎಂದರೆ ಅದು ಅತಿಶಯೋಕ್ತಿಯಲ್ಲ.

ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುವವನೇ ನಿಜವಾದ ನಾಯಕ. ಈ ಮಾತಿಗೆ ಕರ್ನಾಟಕ ತಂಡದ ಮಾಜಿ ನಾಯಕ ಆರ್.ವಿನಯ್ ಕುಮಾರ್ ಅವರೇ ಬೆಸ್ಟ್ ಎಕ್ಸಾಂಪಲ್. ವಿನಯ್ ಕುಮಾರ್ ಕರ್ನಾಟಕ ತಂಡದ ನಾಯಕರಾಗಿದ್ದಾಗ ಬೌಲಿಂಗ್ ಇರಲಿ, ಬ್ಯಾಟಿಂಗ್ ಇರಲಿ, ಫೀಲ್ಡಿಂಗ್ ಇರಲಿ, ನಾಯಕತ್ವವೇ ಇರಲಿ. ಸಾಟಿಯಿಲ್ಲದ ಬದ್ಧತೆಗೆ ಹೆಸರಾಗಿದ್ದ ವಿನಯ್ ತಂಡದ ಸಹ ಆಟಗಾರರಿಗೆ ಪ್ರೇರಣೆಯಾಗುವಂತಹ ಆಟ ಆಡುತ್ತಿದ್ದರು. ವಿನಯ್ ಆಟ, ಮೈದಾನದಲ್ಲಿ ಅವರು ತೋರುತ್ತಿದ್ದ ಕಮಿಟ್ಮೆಂಟ್ ಇತರರಿಗೆ ಸ್ಫೂರ್ತಿಯಾಗುತ್ತಿತ್ತು. ಆದರೆ ಈ ಬಾರಿ ತಂಡವನ್ನು ಮುನ್ನಡೆಸಿದ ಕರುಣ್ ನಾಯರ್ ಅವರಲ್ಲಿ ಆ ಬದ್ಧತೆ ಕಾಣಲೇ ಇಲ್ಲ.

ನಾಯಕನಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮಾತು ಪಕ್ಕಕ್ಕಿರಲಿ. ಒಬ್ಬ ಬ್ಯಾಟ್ಸ್’ಮನ್ ಆಗಿ ಕರುಣ್ ನಾಯರ್ ಅವರದ್ದು ಅತ್ಯಂತ ನಿರಾಶಾದಾಯಕ ಪ್ರದರ್ಶನ. ಟೆಸ್ಟ್ ಕ್ರಿಕೆಟ್’ನ ತ್ರಿಶತಕ ವೀರ ಕರುಣ್ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಆಡಿದ 9 ಪಂದ್ಯಗಳ 15 ಇನ್ನಿಂಗ್ಸ್’ಗಳಲ್ಲಿ ಗಳಿಸಿದ ರನ್ ಎಷ್ಟು ಗೊತ್ತೇ.? ಕೇವಲ 366 ರನ್(8, 5, 13, 81, 64, 00, 10, 17, 22, 47, 71*, 04, 15, 03, 06). 15 ಇನ್ನಿಂಗ್ಸ್’ಗಳಲ್ಲಿ ಒಂದೂ ಶತಕ ಬಾರಿಸಲು ಸಾಧ್ಯವಾಗಲಿಲ್ಲ ಎಂದರೆ ನೀವು ನಂಬಲೇಬೇಕು. ಬಂಗಾಳ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಸೇರಿ ಕರುಣ್ ಗಳಿಸಿದ್ದು ಕೇವಲ 9 ರನ್. ನಾಯಕನೊಬ್ಬ ಇಂತಹ ತೀರಾ ಕಳಪೆ ಆಟವಾಡುತ್ತಿದ್ದಾಗ ಸಹ ಆಟಗಾರರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲು ಹೇಗೆ ಸಾಧ್ಯ? ಸಹ ಆಟಗಾರರಲ್ಲಿ ಹೋರಾಟದ ಕಿಚ್ಚು ತುಂಬಲು ಹೇಗೆ ಸಾಧ್ಯ?

ಹಾಗಾದರೆ ಕಳಪೆ ಪ್ರದರ್ಶನ ನೀಡುತ್ತಿದ್ದ ಕರುಣ್ ನಾಯರ್ ಅವರನ್ನು ತಂಡದಿಂದ ಕೈಬಿಡಬಹುದಿತ್ತಲ್ಲವೇ? ಕನಿಷ್ಠ ಪಕ್ಷ ನಾಯಕತ್ವದಿಂದ ಕೆಳಗಿಳಿಸಿ ಬೇರೆ ಆಟಗಾರರಿಗೆ ಆ ಜವಾಬ್ದಾರಿ ವಹಿಸಬಹುತ್ತವೇ? ಅದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲದ ಮಾತು. ಏಕೆಂದರೆ ಕರುಣ್ ನಾಯರ್ ರನ್ ಹೊಡೆಯಲಿ ಬಿಡಲಿ. ಅವರ ಹಿತ ಕಾಯಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಮಹಾನುಭಾವರೊಬ್ಬರಿದ್ದಾರೆ. ಕೆಎಸ್’ಸಿಎನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರೇ ಹಲವಾರು ವರ್ಷಗಳಿಂದ ಕರುಣ್ ನಾಯರ್ ಪಾಲಿಗೆ “ಗಾಡ್ ಫಾದರ್”. ಕರುಣ್ ನಾಯರ್ ಜಾಗದಲ್ಲಿ ಬೇರೆ ಯಾವ ಆಟಗಾರನಿದ್ದರೂ ತಂಡದಿಂದ ಹೊರ ಬಿದ್ದು ಯಾವುದೋ ಕಾಲವಾಗುತ್ತಿತ್ತು. ಆದರೆ ಇಂತಹ ದಯನೀಯ ವೈಫಲ್ಯ ಎದುರಿಸಿದ ಸಂದರ್ಭದಲ್ಲೂ ಕರುಣ್ ನಾಯರ್ ಪ್ರತೀ ಪಂದ್ಯದಲ್ಲೂ ಆಡುವ ಅವಕಾಶ ಪಡೆದಿದ್ದಾರೆ ಎಂದರೆ ಅದಕ್ಕೆ ಕಾರಣ ಅವರ ಹಿತ ಕಾಯುತ್ತಿರುವ ಆ “ಗಾಡ್ ಫಾದರ್”.

ಕರುಣ್ ನಾಯರ್ ವಿಫಲರಾಗಿರುವುದು ರಣಜಿ ಟ್ರೋಫಿಯಲ್ಲಿ ಮಾತ್ರ ಅಲ್ಲ. ಅದಕ್ಕೂ ಮೊದಲು ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲೂ ಕರುಣ್ ರನ್ ಗಳಿಸಿರಲಿಲ್ಲ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ 9 ಪಂದ್ಯಗಳ ಆರು ಇನ್ನಿಂಗ್ಸ್’ಗಳಲ್ಲಿ ಕರುಣ್ ಗಳಿಸಿದ್ದು 66 ರನ್. ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಟ್ರೋಫಿ ಎರಡನ್ನೂ ಸೇರಿಸಿ ಆಡಿದ 21 ಇನ್ನಿಂಗ್ಸ್’ಗಳಲ್ಲಿ ಕರುಣ್ ಗಳಿಸಿರುವುದು ಕೇವಲ 432 ರನ್. ಇಂತಹ ಪ್ರದರ್ಶನವನ್ನು ನೀಡಿ ತಂಡದಲ್ಲಿ ಸತತವಾಗಿ ಅವಕಾಶ ಪಡೆಯಬೇಕಾದರೆ ಅದರ ಹಿಂದೆ ಒಂದು ಶಕ್ತಿ ಇರಲೇಬೇಕು. ಆ ಶಕ್ತಿಯೇ ಕರುಣ್ ನಾಯರ್ ಅವರ ಹಿತ ಕಾಯುತ್ತಿರುವ ಆ “ಗಾಡ್ ಫಾದರ್”.

ಕರ್ನಾಟಕ ತಂಡದ ಆಯ್ಕೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಎಂಬುದೂ ಈಗ ಗುಟ್ಟಾಗಿ ಉಳಿದಿಲ್ಲ. ಅದಕ್ಕೊಂದು ಉದಾಹರಣೆಯನ್ನು ನೀಡುವುದಾದರೆ, ಪ್ರದರ್ಶನ ಉತ್ತಮ ಮಟ್ಟದಲ್ಲಿಲ್ಲ ಎಂಬ ಕಾರಣಕ್ಕಾಗಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರನ್ನು ಉಪನಾಯಕನ ಪಟ್ಟದಿಂದ ಕೆಳಗಿಳಿಸಿ ಕೊನೆಗೆ ಆಡುವ 11ರ ಬಳಗದಿಂದಲೇ ಹೊರಗಿಡಲಾಯಿತು. ಶ್ರೇಯಸ್ ಗೋಪಾಲ್ ವಿಕೆಟ್ ಪಡೆಯಲು ವಿಫಲರಾಗುತ್ತಿದ್ದಾರೆ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಪರಿಣಾಮ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ಶ್ರೇಯಸ್ ಗೋಪಾಲ್ ಆಡಲಿಲ್ಲ. ತಂಡ ಸಂಕಷ್ಟದಲ್ಲಿದ್ದಾಗ ಸದಾ ನೆರವಿಗೆ ಧಾವಿಸುತ್ತಿದ್ದ ಶ್ರೇಯಸ್ ಗೋಪಾಲ್ ಇದ್ದಿದ್ದರೆ ಬಂಗಾಳ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಗೆಲ್ಲಬಹುದಾಗಿತ್ತೇನೋ? ಅದು ಬೇರೆ ಮಾತು. ಆದರೆ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಶ್ರೇಯಸ್ ಗೋಪಾಲ್ ಅವರನ್ನು ಉಪನಾಯಕತ್ವದಿಂದ ಕೆಳಗಿಳಿಸಿ ಆಡುವ ಬಳಗದಿಂದ ಹೊರಗಿಡುವುದಾದರೆ, ಕರುಣ್ ನಾಯರ್ ವಿಚಾರದಲ್ಲಿ ಈ ಮಾನದಂಡ ಏಕಿಲ್ಲ? ಶ್ರೇಯಸ್ ಗೋಪಾಲ್ ವಿಕೆಟ್ ಪಡೆಯಲು ವಿಫಲರಾಗಿದ್ದಾರೆ ನಿಜ. ಕರುಣ್ ನಾಯರ್ ಕೂಡ ರನ್ ಗಳಿಸಲು ವಿಫಲರಾಗಿದ್ದಾರೆ ಅಲ್ಲವೇ? ಅವರನ್ನು ಏಕೆ ನಾಯಕತ್ವದಿಂದ ಕೆಳಗಳಿಸಲಿಲ್ಲ? ರನ್ ಗಳಿಸದ ಕಾರಣಕ್ಕೆ ತಂಡದಿಂದ ಹೊರಗಿಡಲಿಲ್ಲ? ಕಾರಣ ಸಿಂಪಲ್. ಕರುಣ್ ಮೇಲಿರುವ ಆ “ಗಾಡ್ ಫಾದರ್” ಕೃಪಾಕಟಾಕ್ಷ.

ಆಡುವ ಬಳಗದಿಂದಲ್ಲ, 15ರ ತಂಡದಿಂದಲೇ ಆಚೆ ಕಳುಹಿಸಲು ಕರುಣ್ ನಾಯರ್ ಈ ಬಾರಿ ಅರ್ಹರಾಗಿದ್ದರು. ಅಷ್ಟರ ಮಟ್ಟಿಗೆ ಅವರ ಬ್ಯಾಟಿಂಗ್ ಹಳ್ಳ ಹಿಡಿದಿತ್ತು. ಆದರೆ ಶ್ರೇಯಸ್ ಗೋಪಾಲ್ ವಿಚಾರದಲ್ಲಿ ಅನುಸರಿಸಿದ ಮಾನದಂಡವನ್ನು ಕರುಣ್ ವಿಚಾರದಲ್ಲಿ ಏಕೆ ಅನುಸರಿಸಲಿಲ್ಲ? ಕಾರಣ ಸಿಂಪಲ್. ಅವರ ಹಿತ ಕಾಯುತ್ತಿರುವ ಆ “ಗಾಡ್ ಫಾದರ್” ಮಹಿಮೆ. ಇಂತಹ ವ್ಯವಸ್ಥೆ ಇರುವವರೆಗೆ ಕರ್ನಾಟಕ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವೇ ಇಲ್ಲ.

ಕರುಣ್ ನಾಯರ್ ಪ್ರತಿಭಾವಂತ ಎಂಬುದರಲ್ಲಿ ಎರಡು ಮಾತಿಲ್ಲ. ಕರ್ನಾಟಕಕ್ಕಾಗಿ ಹಲವಾರು ಅದ್ಭುತ ಇನ್ನಿಂಗ್ಸ್’ಗಳನ್ನು ಆಡಿದ್ದಾರೆ. 2014-15ನೇ ಸಾಲಿನ ಫೈನಲ್ ಪಂದ್ಯದಲ್ಲಿ ಅಮೋಘ ತ್ರಿಶತಕ ಬಾರಿಸಿ ಕರ್ನಾಟಕ ತಂಡವನ್ನು ಸತತ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದವರು ಕರುಣ್ ನಾಯರ್. ಆದರೆ ಅವರು ಸತತವಾಗಿ ಅವಕಾಶ ಪಡೆಯಲು ಅದೊಂದೇ ಇನ್ನಿಂಗ್ಸ್ ಮಾನದಂಡವಾಗಬಾರದು. ಕರ್ನಾಟಕಕ್ಕೆ ಈ ಹಿಂದೆ ಪಂದ್ಯಗಳನ್ನು ಗೆಲ್ಲಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಈಗ ರನ್ ಗಳಿಸದಿದ್ದರೂ ತಂಡದಲ್ಲಿ ಮುಂದುವರಿಸುತ್ತಿರುವುದು ಎಷ್ಟು ಸರಿ? ಇದಕ್ಕೆ ತಂಡದ ತರಬೇತುದಾರರು, ಆಯ್ಕೆ ಸಮಿತಿಯ ಅಧ್ಯಕ್ಷ ರಘುರಾಮ್ ಭಟ್ ಮತ್ತು ಕರುಣ್ ನಾಯರ್ ಅವರ ಹಿತ ಕಾಯುತ್ತಿರುವ ಆ “ಗಾಡ್ ಫಾದರ್” ಉತ್ತರಿಸಬೇಕು.
ಕೊನೆಯಲ್ಲಿ ಒಂದು ಮಾತು. ಆಟಗಾರ ಎಷ್ಟೇ ದೊಡ್ಡವರಿರಲಿ. ತಂಡಕ್ಕಿಂತ ಯಾರೂ ದೊಡ್ಡವರಲ್ಲ.

LEAVE A REPLY

Please enter your comment!
Please enter your name here

two × one =