ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಕ್ತು ‘ಸ್ಟನ್ ಗನ್’ ಬಲ..!

0

ಬೆಂಗಳೂರು, ಏಪ್ರಿಲ್ 12: ಐಪಿಎಲ್-12 ಟೂರ್ನಿಯಲ್ಲಿ ಸತತ 6 ಪಂದ್ಯಗಳನ್ನು ಸೋತು, ಗೆಲುವಿನ ಮುಖವನ್ನೇ ಕಾಣದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಟನ್ ಗನ್ ಬಲ ಸಿಕ್ಕಿದೆ.
ದಕ್ಷಿಣ ಆಫ್ರಿಕಾದ ದಿಗ್ಗಜ ವೇಗದ ಬೌಲರ್ ಡೇಲ್ ಸ್ಟೇಯ್ನ್ ರಾಯಲ್ ಚಾಲೆಂಜರ್ಸ್ ತಂಡ ಸೇರಿಕೊಳ್ಳಲಿದ್ದಾರೆ. ಆರ್ ಸಿ ಬಿ ತಂಡದಲ್ಲಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ನೇಥನ್ ಕುಲ್ಟರ್ ನೈಲ್ ಗಾಯಗೊಂಡಿರುವುದರಿಂದ ಅವರ ಸ್ಥಾನದಲ್ಲಿ ಡೇಲ್ ಸ್ಟೇಯ್ನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 35 ವರ್ಷದ ಬಲಗೈ ವೇಗಿ ಸ್ಟೇಯ್ನ್ ಅವರನ್ನು ಐಪಿಎಲ್ ಹರಾಜಿನಲ್ಲಿ ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ.
2008ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಪರ ಆಡಿದ್ದ ಸ್ಟೇಯ್ನ್, ನಂತರ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿದ್ದಾರೆ. ಇದೀಗ ಮತ್ತೆ ರಾಯಲ್ ಚಾಲೆಂಜರ್ಸ್ ಪಾಳೆಯ ಸೇರಿಕೊಂಡಿದ್ದಾರೆ.
ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ವೇಗದ ಬೌಲರ್ ಗಳ ಪೈಕಿ ಒಬ್ಬರಾಗಿರುವ ಡೇಲ್ ಸ್ಟೇಯ್ನ್ ದಕ್ಷಿಣ ಆಫ್ರಿಕಾ ಪರ 93 ಟೆಸ್ಟ್ ಪಂದ್ಯಗಳನ್ನಾಡಿದ್ದು, 439 ವಿಕೆಟ್ಸ್ ಪಡೆದಿದ್ದಾರೆ. 125 ಏಕದಿನ ಪಂದ್ಯಗಳಿಂದ 196 ವಿಕೆಟ್ಸ್ ಹಾಗೂ 44 ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ 61 ವಿಕೆಟ್ಸ್ ಕಬಳಿಸಿದ್ದಾರೆ.

LEAVE A REPLY

Please enter your comment!
Please enter your name here

6 − 3 =