ಕರ್ನಾಟಕ To ಸೌರಾಷ್ಟ್ರ To ಕೇರಳ: ರಾಬಿನ್ ಉತ್ತಪ್ಪ ಹೊಸ ಇನ್ನಿಂಗ್ಸ್

0
Robin Uthappa

ಬೆಂಗಳೂರು, ಜುಲೈ 22: ಕರ್ನಾಟಕದ ಅನುಭವಿ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕೇರಳ ಪರ ಆಡಲಿದ್ದಾರೆ. ಕಳೆದೆರಡು ಸಾಲಿನಲ್ಲಿ ಸೌರಾಷ್ಟ್ರ ತಂಡದ ಪರ ಆಡಿದ್ದ 33 ವರ್ಷದ ಉತ್ತಪ್ಪ ಈ ಬಾರಿಯ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕೇರಳ ಪರ ಆಡಲು ಕೇರಳ ಕ್ರಿಕೆಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಡಾ.ತಿಮ್ಮಪ್ಪಯ್ಯ ಟ್ರೋಫಿ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ಈಗಾಗಲೇ ಕೇರಳ ಪರ ಕಣಕ್ಕಿಳಿದಿದ್ದು, ಬಿಜಿಎಸ್ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅಜೇಯ 25 ರನ್ ಗಳಿಸಿದ್ದಾರೆ.

2002-03ನೇ ಸಾಲಿನಲ್ಲಿ ಕರ್ನಾಟಕ ಪರ ಪ್ರಥಮದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಉತ್ತಪ್ಪ 2016-17ನೇ ಸಾಲಿನವರೆಗೆ ಒಟ್ಟು 13 ವರ್ಷಗಳ ಕಾಲ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. 2009ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ರಾಬಿನ್ ಉತ್ತಪ್ಪ ಅವರ ನಾಯಕತ್ವದಲ್ಲಿ ಫೈನಲ್ ತಲುಪಿತ್ತು. ಆದರೆ ಮೈಸೂರಿನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ 6 ರನ್ಗಳ ಸೋಲು ಅನುಭವಿಸಿತ್ತು.

ಕರ್ನಾಟಕ ತಂಡ 2013-14 ಹಾಗೂ 2014-15ನೇ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ಚಾಂಪಿಯನ್ ಆದಾಗ ರಾಬಿನ್ ಉತ್ತಪ್ಪ ಆ ತಂಡದ ಸದಸ್ಯರಾಗಿದ್ದರು. 2017-18ನೇ ಸಾಲಿನಲ್ಲಿ ಸೌರಾಷ್ಟ್ರ ತಂಡಕ್ಕೆ ವಲಸೆ ಹೋಗಿದ್ದ ರಾಬಿನ್ ಉತ್ತಪ್ಪ, ಸೌರಾಷ್ಟ್ರ ಪರ ಎರಡು ವರ್ಷ ಆಡಿದ್ದಾರೆ. 33 ವರ್ಷದ ರಾಬಿನ್ ಉತ್ತಪ್ಪ ಭಾರತ ಪರ 46 ಏಕದಿನ ಹಾಗೂ 13 ಟಿ20 ಪಂದ್ಯಗಳನ್ನಾಡಿದ್ದಾರೆ.

ರಾಬಿನ್ ಉತ್ತಪ್ಪ ಪ್ರಥಮದರ್ಜೆ ಕ್ರಿಕೆಟ್ ಸಾಧನೆ: ಪಂದ್ಯ-136, ರನ್-9118, ಗರಿಷ್ಠ-162, ಶತಕ-21, ಅರ್ಧಶತಕ-51

ರಾಬಿನ್ ಉತ್ತಪ್ಪ ಲಿಸ್ಟ್ ಕ್ರಿಕೆಟ್ ಸಾಧನೆ: ಪಂದ್ಯ-189, ರನ್-6045, ಗರಿಷ್ಠ-169, ಶತಕ-14, ಅರ್ಧಶತಕ-31

LEAVE A REPLY

Please enter your comment!
Please enter your name here

nine − 6 =