Sportseam Exclusive: ಜೀವನದ ಅತ್ಯಂತ ಖುಷಿಯ ಕ್ಷಣ: ಮಯಾಂಕ್ ಅಗರ್ವಾಲ್

0
PC: BCCI

ಬೆಂಗಳೂರು, ಸೆಪ್ಟೆಂಬರ್ 29: ಸಾಕಷ್ಟು ಬಾರಿ ಮಯಾಂಕ್ ಅಗರ್ವಾಲ್ ಅವರ ಸಂದರ್ಶನ ಮಾಡಿದ್ದೇವೆ. ಹಲವಾರು ಬಾರಿ ಅವರ ಮಾತುಗಳನ್ನು ಕೇಳಿದ್ದೇವೆ. ಆದರೆ ಸಂದರ್ಶನ ಮಾಡುವ ವೇಳೆ ಮಯಾಂಕ್ ಮಾತಿನಲ್ಲಿ ಇವತ್ತು ಇದ್ದ ಖುಷಿ ಯಾವತ್ತೂ ಇರಲಿಲ್ಲ. ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾದ ಸಂತಸ ಅವರ ಪ್ರತಿ ಮಾತುಗಳಲ್ಲೂ ಮಾರ್ಧನಿಸುತ್ತಿತ್ತು.
ಅಕ್ಟೋಬರ್ 4ರಂದು ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅವರಿಗೆ ಸ್ಥಾನ ನೀಡಲಾಗಿದೆ. ಶಿಖರ್ ಧವನ್ ಅವರನ್ನು ಕೈಬಿಟ್ಟು ಕರ್ನಾಟಕದ ರನ್ ಮಷಿನ್ ಮಯಾಂಕ್‌ಗೆ ಅವಕಾಶ ಕಲ್ಪಿಸಲಾಗಿದೆ.
ಕಳೆದೊಂದು ವರ್ಷದಲ್ಲಿ ರನ್ ಮಳೆಯನ್ನೇ ಸುರಿಸಿ, ಮೈದಾನದಲ್ಲಿ ಬೆವರು ಹರಿಸಿದ ಮಯಾಂಕ್ ಅಗರ್ವಾಲ್ ಅವರ ಶ್ರಮಕ್ಕೆ ಸಿಕ್ಕ ಪ್ರತಿಲವಿದು. ಭಾರತ ತಂಡಕ್ಕೆ ಆಯ್ಕೆಯಾದ ಕೆಲವೇ ಕ್ಷಣಗಳಲ್ಲಿ ಸ್ಪೋರ್ಟ್ಸ್‌ಸೀಮ್.ಕಾಮ್ ಜೊತೆ ಮಾತನಾಡಿದ ಮಯಾಂಕ್ ರಾಷ್ಟ್ರೀಯ ತಂಡಕ್ಕೆ ಮೊದಲ ಬಾರಿ ಕರೆ ಬಂದ ಸಂತಸ, ಆ ಉದ್ವೇಗ, ಮುಂದಿರುವ ಸವಾಲುಗಳನ್ನು ಹಂಚಿಕೊಂಡರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Q: ಸುದೀರ್ಘ ಕಾಯುವಿಕೆಯ ನಂತರ ಕೊನೆಗೂ ಭಾರತ ತಂಡದಲ್ಲಿ ಅವಕಾಶ ಸಿಕ್ಕಿದೆ. ಹೇಗಿದೆ ಈ ಅನುಭವ?
Mayank: ತುಂಬಾ ಖುಷಿಯಾಗಿದೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅಷ್ಟು ಸಂತಸವಾಗಿದೆ. ನನ್ನ ಶ್ರಮಕ್ಕೆ ಫಲ ಸಿಕ್ಕಿದೆ. ಟೀಮ್ ಇಂಡಿಯಾದಲ್ಲಿ ಎದುರಾಗಲಿರುವ ಸವಾಲನ್ನು ಎದುರು ನೋಡುತ್ತಿದ್ದೇನೆ. ಇದುವರೆಗೆ ನಾನೇನು ಮಾಡುತ್ತಾ ಬಂದಿದ್ದೇನೆಯೋ ಅದನ್ನೇ ಮುಂದುವರಿಸುವುದು ನನ್ನ ಗುರಿ. ಪರಿಶ್ರಮವನ್ನು ಮುಂದುರಿಸುತ್ತೇನೆ. ಗುರಿಯತ್ತ ಗಮನವನ್ನು ಕೇಂದ್ರೀಕರಿಸಿ ಆಡುತ್ತೇನೆ.

Q: ಕಳೆದ 11 ತಿಂಗಳಲ್ಲಿ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದರೂ ಅವಕಾಶ ಸಿಕ್ಕಿರಲಿಲ್ಲ. ಆಗ ಹತಾಶೆಯಾಗಿತ್ತೇ?
Mayank: ಖಂಡಿತಾ ಇಲ್ಲ. ಏಕೆಂದರೆ ಭಾರತ ‘ಎ’, ‘ಬಿ’ ತಂಡಗಳಲ್ಲಿ ಆಡುವ ಅವಕಾಶ ನಿರಂತರವಾಗಿ ಸಿಕ್ಕಿತ್ತು. ಒಬ್ಬ ಆಟಗಾರನಾಗಿ ಉತ್ತಮ ಆಟವಾಡುವುದಷ್ಟೇ ನನ್ನ ಕೆಲಸ. ಆಯ್ಕೆ ನನ್ನ ಕೈಯಲ್ಲಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಚೆನ್ನಾಗಿ ಆಡಿದರೆ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿತ್ತು. ಆ ನಂಬಿಕೆ ನಿಜವಾಗಿದೆ.

Q: ಭಾರತ ತಂಡದ ಪರ ಆಡಬೇಕೆಂಬ ಕನಸು ಚಿಗುರೊಡೆದಿದ್ದು ಯಾವಾಗ?
Mayank: ಅದು ಕ್ರಿಕೆಟ್ ಆಡಲು ಶುರು ಮಾಡಿದಾಗಲೇ ಮನಸ್ಸಿನಲ್ಲಿತ್ತು. ಮುಂದೊಂದು ದಿನ ಭಾರತ ತಂಡದ ಪರ ಆಡಬೇಕು ಎಂಬ ಕನಸು ಬಾಲ್ಯದಲ್ಲೇ ಇತ್ತು. ಅದೇ ಗುರಿ ಹೊತ್ತು ಕ್ರಿಕೆಟ್ ಆರಂಭಿಸಿದೆ. ಸಚಿನ್ ತೆಂಡೂಲ್ಕರ್ ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಕ್ಸರ್‌ಗಳನ್ನು ಬಾರಿಸುತ್ತಿದ್ದುದನ್ನು ನೋಡಿ ನನಗೆ ಕ್ರಿಕೆಟ್ ಆಡಬೇಕೆನಿಸಿತು. ಹೀಗೆ ನನ್ನ ಕ್ರಿಕೆಟ್ ಪಯಣ ಆರಂಭವಾಗಿತ್ತು.

Q: 2010ರ ಅಂಡರ್-19 ವಿಶ್ವಕಪ್‌ನಲ್ಲಿ ಕರ್ನಾಟಕದ ನಿಮ್ಮ ಗೆಳೆಯ ಕೆ.ಎಲ್ ರಾಹುಲ್ ಜೊತೆ ಭಾರತ ತಂಡದ ಇನ್ನಿಂಗ್ಸ್ ಆರಂಭಿಸಿದ್ದಿರಿ. ಈಗ ಟೆಸ್ಟ್ ತಂಡದಲ್ಲೂ ಅಂತಹ ಅವಕಾಶ ಸಿಗುವ ಸಾಧ್ಯತೆಯಿದೆ. ಈ ಬಗ್ಗೆ ಏನು ಹೇಳುತ್ತೀರಿ.
Mayank: ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ಸಿಕ್ಕರೆ ತುಂಬಾ ಖುಷಿ. ಏಕೆಂದರೆ ನಾವಿಬ್ಬರೂ ಜೂನಿಯರ್ ಕ್ರಿಕೆಟ್‌ನಿಂದಲೂ ತುಂಬಾ ವರ್ಷಗಳ ಕಾಲ ಜೊತೆಯಾಗಿ ಆಡಿದ್ದೇವೆ. ಆದರೆ ಭಾರತ ಟೆಸ್ಟ್ ತಂಡದಲ್ಲಿ ನಾನು ಮತ್ತು ರಾಹುಲ್ ಇನ್ನಿಂಗ್ಸ್ ಆರಂಭಿಸುವ ವಿಚಾರ ನಮ್ಮ ಕೈಯಲ್ಲಿಲ್ಲ. ಆ ಅವಕಾಶ ಸಿಕ್ಕರಂತೂ ಅದಕ್ಕಿಂತ ಖುಷಿಯ ಸಂಗತಿ ಮತ್ತೊಂದಿಲ್ಲ.

PC: Mayank/Twitter

ಕರ್ನಾಟಕದ ರನ್ ಮಷಿನ್
ಮಯಾಂಕ್ ಅಗರ್ವಾಲ್ ಕರ್ನಾಟಕದ ರನ್ ಮಷಿನ್. ಕಳೆದ 11 ತಿಂಗಳಲ್ಲಿ ಮಯಾಂಕ್ 13 ಶತಕಗಳ ಸಹಿತ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2017-18ನೇ ಸಾಲಿನ ರಣಜಿ ಟ್ರೋಫಿಯಲ್ಲಿ 8 ಪಂದ್ಯಗಳಿಂದ 5 ಶತಕಗಳ ಸಹಿತ 1160 ರನ್ ಗಳಿಸಿದ್ದ ಮಯಾಂಕ್ ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. ಆ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಅಕ್ಷರಶಃ ರನ್ ಹೊಳೆಯನ್ನೇ ಹರಿಸಿದ್ದ ಮಯಾಂಕ್ 25 ಪಂದ್ಯಗಳಿಂದ 8 ಶತಕಗಳ ಸಹಿತ 2141 ರನ್ ಕಲೆ ಹಾಕಿದ್ದರು. ಇದು ಭಾರತದ ದೇಶೀಯ ಕ್ರಿಕೆಟ್‌ನ ಒಂದೇ ಋತುವಿನಲ್ಲಿ ಆಟಗಾರನೊಬ್ಬ ಗಳಿಸಿದ ಅತ್ಯಕ ರನ್. ಈ ಮೂಲಕ ಮಯಾಂಕ್ 2015-16ನೇ ಸಾಲಿನ ದೇಶೀಯ ಕ್ರಿಕೆಟ್ನಲ್ಲಿ ಮುಂಬೈನ ಶ್ರೇಯಸ್ ಅಯ್ಯರ್ ಅವರ 1947 ರನ್‌ಗಳ ದಾಖಲೆಯನ್ನು ಮುರಿದಿದ್ದರು. ಮಯಾಂಕ್ ಅವರ ದಾಖಲೆಯ 2141 ರಣಜಿ ಟ್ರೋಫಿಯ 1160 ರನ್‌ಗಳ ಜೊತೆಗೆ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ 8 ಪಂದ್ಯಗಳಿಂದ 3 ಶತಕಗಳ ಸಹಿತ 723 ರನ್ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ 9 ಪಂದ್ಯಗಳಿಂದ 258 ರನ್‌ಗಳು ಸೇರಿವೆ.

 

ಭಾರತ ‘ಎ’ ತಂಡದಲ್ಲೂ ಮಯಾಂಕ್ ಗರ್ಜನೆ

ಕರ್ನಾಟಕ ತಂಡದ ಪರ ಮಾತ್ರವಲ್ಲದೆ ಭಾರತ ‘ಎ’ ಪರ ಕೂಡ ಮಯಾಂಕ್ ಅಗರ್ವಾಲ್ ಅದ್ಭುತ ಆಟ ಪ್ರದರ್ಶಿಸುತ್ತಾ ಬಂದಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಭಾರತ ‘ಎ’ ತಂಡದ 4 ಶತಕ (ಇದರಲ್ಲಿ ಒಂದು ದ್ವಿಶತಕ 220) ಸೇರಿ 750ಕ್ಕೂ ರನ್ ಕಲೆ ಹಾಕಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಶತಕ (151*, 112, 112)ಗಳನ್ನು ಬಾರಿಸಿದ್ದ ಮಯಾಂಕ್, ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ (220 ರನ್) ಸಿಡಿಸಿದ್ದರು. ಅಲ್ಲದೆ ಭಾರತ ‘ಎ’, ‘ಬಿ’, ಆಸ್ಟ್ರೇಲಿಯಾ ‘ಎ’ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳನ್ನೊಳಗೊಂಡ ಚತುಷ್ಕೋನ ಏಕದಿನ ಸರಣಿಯಲ್ಲಿ ಭಾರತ ‘ಬಿ’ ತಂಡದ ಪರ ಆಡಿದ್ದ ಮಯಾಂಕ್, ಆಲೂರಿನಲ್ಲಿ ಭಾರತ ‘ಎ’ ವಿರುದ್ಧ 124 ರನ್ ಗಳಿಸಿದ್ದರು. ಹೀಗೆ ಭಾರತ ‘ಎ’ ಹಾಗೂ ‘ಬಿ’ ತಂಡಗಳ ಪರ 5 ಶತಕಗಳೊಂದಿಗೆ ಅಬ್ಬರಿಸಿದ್ದಾರೆ.
ವಡೋದರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡು ದಿನಗಳ ಅಭ್ಯಾಸ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ ಪರ ಆಡುತ್ತಿರುವ ಮಯಾಂಕ್ ಮೊದಲ ದಿನವಾದ ಶನಿವಾರ 90 ರನ್‌ಗಳಿಗೆ ಔಟಾಗಿ ಶತಕ ವಂಚಿತರಾಗಿದ್ದಾರೆ. ಹೀಗೆ ರನ್ ಮಷಿನ್ ಮಯಾಂಕ್ ಅವರ ಶ್ರಮಕ್ಕೆ ಕೊನೆಗೂ ಫಲ ಸಿಕ್ಕಿದೆ.

LEAVE A REPLY

Please enter your comment!
Please enter your name here

three × five =