ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ನಾಳೆ ವಿದರ್ಭ ಎದುರಾಳಿ.. ಗೆದ್ದರೆ ಫೈನಲ್, ಸೋತರೆ..?

0
PC: Manish Pandey/Twitter

ಇಂದೋರ್, ಮಾರ್ಚ್ 11: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಕರ್ನಾಟಕದ ತಂಡ ನಾಳೆ ವಿದರ್ಭ ತಂಡವನ್ನು ಎದುರಿಸಲಿದೆ.

ಇಂದೋರ್ ನ ಎಮೆರಾಲ್ಡ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಗೆದ್ದರೆ, ಕರ್ನಾಟಕ ತಂಡ ಅಜೇಯವಾಗಿ ಫೈನಲ್ ತಲುಪಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಮುಂಬೈ, ಉತ್ತರ ಪ್ರದೇಶ ಮತ್ತು ದೆಹಲಿ ವಿರುದ್ಧ ಗೆದ್ದಿರುವ ಕರ್ನಾಟಕ ಲೀಗ್ ಹಂತ ಸೇರಿದಂತೆ ಟೂರ್ನಿಯಲ್ಲಿ ಸತತ 10 ಗೆಲುವು ದಾಖಲಿಸಿದೆ.

ಸೂಪರ್ ಲೀಗ್ ಹಂತದಲ್ಲಿ ಆಡಿರುವ 3 ಪಂದ್ಯಗಳಿಂದ 3 ಗೆಲುವುಗಳ ಸಹಿತ 12 ಅಂಕ ಗಳಿಸಿರುವ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ರಣಜಿ ಚಾಂಪಿಯನ್ ವಿದರ್ಭ ತಂಡ 3 ಪಂದ್ಯಗಳಲ್ಲಿ 2 ಗೆಲುವು ಮತ್ತು 1 ಸೋಲಿನೊಂದಿಗೆ 8 ಅಂಕ ಗಳಿಸಿ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿರುವ ಮುಂಬೈ ಕೂಡ 3 ಪಂದ್ಯಗಳಲ್ಲಿ 2 ಗೆಲುವು ಮತ್ತು 1 ಸೋಲು ಕಂಡಿದೆ.

ನಾಳೆ ನಡೆಯಲಿರುವ ಪಂದ್ಯವನ್ನು ಗೆದ್ದರೆ ಕರ್ನಾಟಕ ನೇರವಾಗಿ ಫೈನಲ್ ತಲುಪಲಿದೆ. ಒಂದು ವೇಳೆ ಸೋತರೆ ಕರ್ನಾಟಕದ ಜೊತೆ ವಿದರ್ಭ ತಂಡದ ಅಂಕ ಗಳಿಕೆಯೂ 12 ಆಗಲಿದೆ. ಮತ್ತೊಂದು ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಮುಂಬೈ ಗೆದ್ದರೆ ಆ ತಂಡದ ಅಂಕವೂ 12ಕ್ಕೆ ಏರಲಿದೆ. ಆಗ ಕರ್ನಾಟಕ, ವಿದರ್ಭ ಮತ್ತು ಮುಂಬೈ ತಂಡಗಳು 12 ಅಂಕ ಗಳಿಸಲಿದ್ದು, ಫೈನಲ್ ಪ್ರವೇಶಕ್ಕಾಗಿ ರನ್ ರೇಟ್ ಗಣನೆಗೆ ಬರಲಿದೆ. ಸದ್ಯ ಕರ್ನಾಟಕ ತಂಡ 1.602 ರನ್ ರೇಟ್ ಹೊಂದಿದ್ದರೆ, ವಿದರ್ಭ 1.166 ಮತ್ತು ಮುಂಬೈ -0.1 ರನ್ ರೇಟ್ ಹೊಂದಿದೆ.

ಸೈಯದ್ ಮುಷ್ತಾಕ್ ಅಲಿ ಟಿ20 ಸೂಪರ್ ಲೀಗ್: ‘ಬಿ’ ಗುಂಪಿನ ಪಾಯಿಂಟ್ಸ್

ತಂಡ              ಪಂದ್ಯ   ಗೆಲುವು  ಸೋಲು ಅಂಕ    ರನ್ ರೇಟ್

ಕರ್ನಾಟಕ:        03       02       00      12       1.602

ವಿದರ್ಭ:           03       02       01       08       1.166                                          

ಮುಂಬೈ:          03       02       01       08       -0.100 

ಉತ್ತರ ಪ್ರದೇಶ:   03       00      03       00      -0.500

ದೆಹಲಿ:            04      01       03       04      -2.423

LEAVE A REPLY

Please enter your comment!
Please enter your name here

3 × 3 =