
ಬೆಂಗಳೂರು, ಅಕ್ಟೋಬರ್ 11: ಮುಂಬೈ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಪಂದ್ಯವನ್ನು ನೋಡಿದವರಿಗೆ ಪೀಣ್ಯ ಎಕ್ಸ್’ಪ್ರೆಸ್ ಅಭಿಮನ್ಯು ಮಿಥುನ್ ಅವರ 2.0 ಅವತಾರ ಕಾಣ ಸಿಕ್ಕಿತ್ತು. ಇಲ್ಲಿಯವರೆಗೆ ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್ ನೆರಳಲ್ಲಿ ಮಂಕಾಗಿದ್ದ ಮಿಥುನ್, ಈಗ ವಿನಯ್ ಇಲ್ಲದ ಕರ್ನಾಟಕ ತಂಡದ ಪಾಲಿಗೆ ಹಿರಿಯಣ್ಣನಾಗಿ ಅಬ್ಬರಿಸುತ್ತಿದ್ದಾರೆ.
ಹಾಲಿ ಚಾಂಪಿಯನ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ಅವರ ಸಿಡಿಲಬ್ಬರದ ಶತಕದ ಆರ್ಭಟಕ್ಕೆ ಬೆದರಿದ ಕರ್ನಾಟಕ ಸೋಲಿನತ್ತ ಮುಖ ಮಾಡಿ ನಿಂತಿತ್ತು. ಆದರೆ ದುಬೆ ವಿಕೆಟ್ ಹಾರಿಸಿದ ಮಿಥುನ್, ಕೊನೆಯ ಕ್ಷಣದಲ್ಲಿ ಪಂದ್ಯವನ್ನು ರಾಜ್ಯ ತಂಡದ ಕೈಯಿಂದ ಕಸಿಯುವ ಬೆದರಿಕೆಯೊಡ್ಡಿದ ಧವಳ್ ಕುಲಕರ್ಣಿಯನ್ನೂ ಪೆವಿಲಿಯನ್’ಗಟ್ಟಿ ಕರ್ನಾಟಕ ತಂಡಕ್ಕೆ 9 ರನ್’ಗಳ ರೋಚಕ ಗೆಲುವು ತಂದುಕೊಟ್ಟರು. ಇಲ್ಲಿ ಕರ್ನಾಟಕ ತಂಡ ಪಂದ್ಯ ಗೆಲ್ಲಲು ಸಹಕಾರಿಯಾದದ್ದು ವೇಗಿ ಅಭಿಮನ್ಯು ಮಿಥುನ್ ಅವರ ಅನುಭವದ ಬೌಲಿಂಗ್.
ಕರ್ನಾಟಕ ಕ್ರಿಕೆಟ್ ಕಂಡ ದಿಗ್ಗಜ ನಾಯಕ, ದಿಗ್ಗಜ ವೇಗದ ಬೌಲರ್ ಆರ್.ವಿನಯ್ ಕುಮಾರ್ ಪ್ರಸಕ್ತ ಸಾಲಿನಲ್ಲಿ ರಾಜ್ಯ ತಂಡವನ್ನು ತೊರೆದು ಪುದುಚೇರಿ ಪರ ಆಡುತ್ತಿದ್ದಾರೆ. ಯುವ ಬೌಲರ್’ಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿನಯ್ ಈ ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ವಿನಯ್ ಇಲ್ಲದ ಕರ್ನಾಟಕ ತಂಡದ ಬೌಲಿಂಗ್ ಪಡೆಗೆ ಮಿಥುನ್ ಅವರೇ ಹಿರಿಯಣ್ಣ. ಯುವ ವೇಗಿಗಳಾದ ಎಂ.ಪ್ರಸಿದ್ಧ್ ಕೃಷ್ಣ, ರೋನಿತ್ ಮೋರೆ, ವಿ.ಕೌಶಿಕ್ ಅವರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಮಿಥುನ್ ಹೆಗಲೇರಿದೆ. ಆ ಜವಾಬ್ದಾರಿಯನ್ನು ಪ್ರಸಕ್ತ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತವಾಗಿ ನಿಭಾಯಿಸುತ್ತಾ ತಾವೂ ಕೂಡ ತಂಡದ ಗೆಲುವಿಗೆ ನೆರವಾಗುವಂತಹ ಬೌಲಿಂಗ್ ಪ್ರದರ್ಶನ ತೋರುತ್ತಿದ್ದಾರೆ.
29 ವರ್ಷದ ಬಲಗೈ ವೇಗಿ ಮಿಥುನ್ ಅದ್ಭುತ ಪ್ರತಿಭಾವಂತ. 2009ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಮಿಥುನ್, ಚೊಚ್ಚಲ ಪಂದ್ಯದಲ್ಲೇ ಉತ್ತರ ಪ್ರದೇಶ ವಿರುದ್ಧ ಹ್ಯಾಟ್ರಿಕ್ ಸಾಧನೆ ಸಹಿತ ಪಂದ್ಯದಲ್ಲಿ 11 ವಿಕೆಟ್ ಪಡೆದ ಅಮೋಘ ಸಾಧನೆ ಮಾಡಿದ್ದರು. ಆ ಸಾಲಿನಲ್ಲಿ ಆಡಿದ 9 ರಣಜಿ ಪಂದ್ಯಗಳಲ್ಲಿ 47 ವಿಕೆಟ್ ಕಬಳಿಸಿದ್ದ ಮಿಥುನ್, ಅದೇ ವರ್ಷ ಭಾರತ ಟೆಸ್ಟ್ ತಂಡಕ್ಕೂ ಆಯ್ಕೆಯಾಗಿದ್ದರು.ಭಾರತ ಪರ ಮಿಥುನ್ 4 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.
ಶರವೇಗದ ಸರದಾರನಾಗಿದ್ದ ಮಿಥುನ್ ಕಳೆದ 10 ವರ್ಷಗಳಿಂದ ಕರ್ನಾಟಕ ತಂಡದ ಪರ ಆಡುತ್ತಿದ್ದಾರೆ. 2013-14 ಹಾಗೂ 2014-15ನೇ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡದ ಸದಸ್ಯರಾಗಿದ್ದರು. ಆದರೆ ದಿಗ್ಗಜ ವೇಗಿ ವಿನಯ್ ಕುಮಾರ್ ಅವರ ಅಬ್ಬರದ ಮುಂದೆ ಮಿಥುನ್ ಮಂಕಾಗಿ ಹೋಗಿದ್ದರು. ಆದರೆ ಈಗ ವಿನಯ್ ಕುಮಾರ್ ಕರ್ನಾಟಕ ತಂಡದಲ್ಲಿಲ್ಲ. ತಂಡದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಜವಾಬ್ದಾರಿ ಮಿಥುನ್ ಹೆಗಲೇರಿದೆ. ಹೊಸ ಸವಾಲಿಗೆ ಎದೆಯೊಡ್ಡಿರುವ ಮಿಥುನ್ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ 5 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದಾರೆ.