ವಿಜಯ್ ಹಜಾರೆ ಟ್ರೋಫಿ: ನಾಳೆ ಚಿನ್ನಸ್ವಾಮಿಯಲ್ಲಿ ಕರ್ನಾಟಕ Vs ತಮಿಳುನಾಡು ಫೈನಲ್ ಫೈಟ್.. Entry Free

0

ಬೆಂಗಳೂರು, ಆಕ್ಟೋಬರ್ 24: ಮೂರು ಬಾರಿಯ ಚಾಂಪಿಯನ್ ಕರ್ನಾಟಕ ಹಾಗೂ 5 ಬಾರಿಯ ಚಾಂಪಿಯನ್ ತಮಿಳುನಾಡು ತಂಡಗಳು, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಲೀಗ್ ಹಂತದಿಂದ ಸೆಮಿಫೈನಲ್ವರೆಗೆ ಆಡಿರುವ 9 ಪಂದ್ಯಗಳಲ್ಲಿ ಕೇವಲ ಒಮ್ಮೆ ಮಾತ್ರ ಸೋಲು ಕಂಡಿರುವ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಅಮೋಘ ಫಾರ್ಮ್ನಲ್ಲಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಮನೆಯಂಗಳದ ಲಾಭ ಕರ್ನಾಟಕ ತಂಡಕ್ಕಿದ್ದು, 4ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಉತ್ಸಾಹದಲ್ಲಿದೆ. 3ನೇ ಲೀಗ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸೋಲು ಕಂಡ ನಂತರ ಕರ್ನಾಟಕ ತಂಡ ಸತತವಾಗಿ ಏಳು ಗೆಲುವುಗಳನ್ನು ದಾಖಲಿಸಿದ್ದು, ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧವೂ ಗೆಲ್ಲುವ ಫೇವರಿಟ್ ತಂಡವಾಗಿದೆ.

PC: twitter/im_manishpandey

ಆರಂಭಿಕ ಬ್ಯಾಟ್ಸ್ಮನ್ಗಳಾದ ಕೆ.ಎಲ್ ರಾಹುಲ್, ದೇವದತ್ ಪಡಿಕಲ್ ಮತ್ತು ನಾಯಕ ಮನೀಶ್ ಪಾಂಡೆ ಅಮೋಘ ಫಾರ್ಮ್ನಲ್ಲಿದ್ದು ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಎಡಗೈ ಬ್ಯಾಟ್ಸ್ಮನ್ ಪಡಿಕಲ್ 10 ಪಂದ್ಯಗಳಿಂದ 2 ಶತಕ ಹಾಗೂ 5 ಅರ್ಧಶತಕಗಳ ಸಹಿತ 74.75ರ ಸರಾಸರಿಯಲ್ಲಿ 598 ರನ್ ಗಳಿಸಿದ್ದಾರೆ. ಸ್ಟಾರ್ ಓಪನರ್ ಹಾಗೂ ಅನುಭವಿ ರಾಹುಲ್ 10 ಪಂದ್ಯಗಳನ್ನಾಡಿ 1 ಶತಕ ಹಾಗೂ 4 ಅರ್ಧಶತಕಗಳ ನೆರವಿನಿಂದ 60.66ರ ಸರಾಸರಿಯಲ್ಲಿ 546 ರನ್ ಕಲೆ ಹಾಕಿದ್ದಾರೆ. ನಾಯಕ ಮನೀಶ್ ಪಾಂಡೆ 10 ಪಂದ್ಯಗಳನ್ನಾಡಿ 1 ಶತಕ ಹಾಗೂ 5 ಅರ್ಧಶತಕಗಳ ಸಹಿತ 105ರ ಅಮೋಘ ಸರಾಸರಿಯಲ್ಲಿ 525 ರನ್ ಗಳಿಸಿದ್ದಾರೆ. ಭಾರತ ಟೆಸ್ಟ್ ತಂಡದಿಂದ ಮರಳಿರುವ ಮಯಾಂಕ್ ಅಗರ್ವಾಲ್, ರೋಹನ್ ಕದಂ ಮತ್ತು ಕರುಣ್ ನಾಯರ್ ಕರ್ನಾಟಕ ತಂಡದ ಬ್ಯಾಟಿಂಗ್ ಶಕ್ತಿಗಳಾಗಿದ್ದಾರೆ. ಆದರೆ ಲೀಗ್ ಹಂತದಲ್ಲಿ ಸಂಪೂರ್ಣ ವೈಫಲ್ಯ ಎದುರಿಸಿರುವ ಕರುಣ್ ನಾಯರ್ 6 ಪಂದ್ಯಗಳಿಂದ ಕೇವಲ 66 ರನ್ ಗಳಿಸಿದ್ದಾರೆ.

ಪುದುಚೇರಿ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೊಳಗಾಗಿದ್ದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಫೈನಲ್ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. 8 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದ ಬಲಗೈ ವೇಗಿ ಪ್ರಸಿದ್ಧ್ ರಾಜ್ಯ ತಂಡದ ಪ್ರಮುಖ ಬೌಲಿಂಗ್ ಶಕ್ತಿಯಾಗಿದ್ದರು. ಪ್ರಸಿದ್ಧ್ ಅನುಪಸ್ಥಿತಿಯಲ್ಲಿ ಹೊಸ ಚೆಂಡಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ವೇಗಿ ವಿ.ಕೌಶಿಕ್ ಮೇಲೆ ಕರ್ನಾಟಕ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಛತ್ತೀಸ್ಗಢ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಹೊಸ ಚೆಂಡಿನಲ್ಲಿ ಬೌಲಿಂಗ್ ಆರಂಭಿಸಿದ್ದ ಕೌಶಿಕ್ ಆರಂಭದಲ್ಲೇ 3 ವಿಕೆಟ್ ಪಡೆದು ರಾಜ್ಯ ತಂಡಕ್ಕೆ ಮೇಲುಗೈ ತಂದುಕೊಟ್ಟಿದ್ದರು. ಸ್ವಿಂಗ್ ದಾಳಿಗೆ ಹೆಸರಾಗಿರುವ ಕೌಶಿ ಆಡಿರುವ 5 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದಾರೆ. ಅನುಭವಿ ವೇಗಿ, ಪೀಣ್ಯ ಎಕ್ಸ್ಪ್ರೆಸ್ ಅಭಿಮನ್ಯು ಮಿಥುನ್(8 ಪಂದ್ಯಗಳಿಂದ 15 ವಿಕೆಟ್ಸ್), ರೋನಿತ್ ಮೋರೆ(8 ಪಂದ್ಯಗಳಿಂದ 10 ವಿಕೆಟ್ಸ್), ಆಫ್ಸ್ಪಿನ್ನರ್ ಕೆ.ಗೌತಮ್(10 ಪಂದ್ಯಗಳಿಂದ 14 ವಿಕೆಟ್ಸ್) ಹಾಗೂ ಲೆಗ್ಸ್ಪಿನ್ನರ್ ಪ್ರವೀಣ್ ದುಬೆ(4 ಪಂದ್ಯಗಳಿಂದ 9 ವಿಕೆಟ್ಸ್) ಕರ್ನಾಟಕದ ಬೌಲಿಂಗ್ ಶಕ್ತಿಗಳಾಗಿದ್ದಾರೆ.

ಮತ್ತೊಂದೆಡೆ ಅನುಭವಿ ಆಟಗಾರರಿಂದ ಕೂಡಿರುವ ತಮಿಳುನಾಡು ತಂಡ ಸೆಮಿಫೈನಲ್ನಲ್ಲಿ ಗುಜರಾತ್ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ. ಮುರಳಿ ವಿಜಯ್, ಅಭಿನವ್ ಮುಕುಂದ್, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ವಿಜಯ್ ಶಂಕರ್, ವಾಷಿಂಗ್ಟನ್ ಸುಂದರ್, ಬಾಬಾ ಅಪರಾಜಿತ್, ಸೆಮಿಫೈನಲ್ ಪಂದ್ಯದ ಹೀರೊ ಶಾರುಖ್ ಖಾನ್ ಅವರಿಂದ ಕೂಡಿರುವ ತಮಿಳುನಾಡು ಅಪಾಯಕಾರಿ ತಂಡವಾಗಿದೆ. ದಿನೇಶ್ ಕಾರ್ತಿಕ್ ನಾಯಕತ್ವದ ತಮಿಳುನಾಡು ತಂಡ ಪ್ರಸಕ್ತ ಟೂರ್ನಿಯಲ್ಲಿ ಸೋಲನ್ನೇ ಕಂಡಿಲ್ಲ.

ಫೈನಲ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ.15ರಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ತಂಡ 2013-14, 2014-15 ಹಾಗೂ 2017-18ರಲ್ಲಿ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದರೆ, ತಮಿಳುನಾಡು ತಂಡ 2002-03, 2004-05, 2008-09, 2009-10, 2016-17ರಲ್ಲಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.

ಕರ್ನಾಟಕ Vs ತಮಿಳುನಾಡು ಫೈನಲ್ 

Match starts: 9 AM

Venue: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

Live: Star Sports 2, Star Sports 2 HD & Hot Star

ತಂಡಗಳ ವಿವರ: ಕರ್ನಾಟಕ: ಮನೀಶ್ ಪಾಂಡೆ(ನಾಯಕ), ಕೆ.ಎಲ್ ರಾಹುಲ್(ಉಪನಾಯಕ-ವಿಕೆಟ್ ಕೀಪರ್), ದೇವದತ್ ಪಡಿಕಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ರೋಹನ್ ಕದಂ, ಕೆ.ಗೌತಮ್, ಪ್ರವೀಣ್ ದುಬೆ, ಅಭಿಮನ್ಯು ಮಿಥುನ್, ರೋನಿತ್ ಮೋರೆ, ವಿ.ಕೌಶಿಕ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಬಿ.ಆರ್ ಶರತ್(ವಿಕೆಟ್ ಕೀಪರ್), ಪ್ರತೀಕ್ ಜೈನ್.

ತಮಿಳುನಾಡು: ದಿನೇಶ್ ಕಾರ್ತಿಕ್(ನಾಯಕ), ಮುರಳಿ ವಿಜಯ್, ಅಭಿನವ್ ಮುಕುಂದ್, ಬಾಬಾ ಅಪರಾಜಿತ್, ವಿಜಯ್ ಶಂಕರ್(ಉಪನಾಯಕ), ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಸಿ.ಹರಿ ನಿಶಾಂತ್, ಎನ್.ಜಗದೀಶನ್(ವಿಕೆಟ್ ಕೀಪರ್), ಜೆ.ಕೌಶಿಕ್, ಎಂ.ಮೊಹಮ್ಮದ್, ಟಿ.ನಟರಾಜನ್, ಆರ್.ಸಾಯಿ ಕಿಶೋರ್, ಶಾರುಖ್ ಖಾನ್, ಎಂ.ಸಿದ್ಧಾರ್ಥ್, ಅಭಿಷೇಕ್ ತನ್ವರ್, ಕೆ.ವಿಘ್ನೇಶ್.

ಕರ್ನಾಟಕ ತಂಡದ ಫೈನಲ್ ಹಾದಿ

ಮೊದಲ ಲೀಗ್ ಪಂದ್ಯ: ಜಾರ್ಖಂಡ್ ವಿರುದ್ಧ 123 ರನ್ ಗೆಲುವು

2ನೇ ಲೀಗ್ ಪಂದ್ಯ: ಕೇರಳ ವಿರುದ್ಧ 60 ರನ್ ಗೆಲುವು

3ನೇ ಲೀಗ್ ಪಂದ್ಯ: ಹೈದರಾಬಾದ್ ವಿರುದ್ಧ 21 ರನ್ ಸೋಲು

4ನೇ ಲೀಗ್ ಪಂದ್ಯ: ಛತ್ತೀಸ್ಗಢ ವಿರುದ್ಧ 79 ರನ್ ಗೆಲುವು

5ನೇ ಲೀಗ್ ಪಂದ್ಯ: ಆಂಧ್ರ ವಿರುದ್ಧ 53 ರನ್ ಗೆಲುವು

6ನೇ ಲೀಗ್ ಪಂದ್ಯ: ಮುಂಬೈ ವಿರುದ್ಧ 9 ರನ್ ಗೆಲುವು

7ನೇ ಲೀಗ್ ಪಂದ್ಯ: ಸೌರಾಷ್ಟ್ರ ವಿರುದ್ಧ 8 ವಿಕೆಟ್ ಗೆಲುವು

8ನೇ ಲೀಗ್ ಪಂದ್ಯ: ಗೋವಾ ವಿರುದ್ಧ 8 ವಿಕೆಟ್ ಗೆಲುವು

ಕ್ವಾರ್ಟರ್ ಫೈನಲ್: ಪುದುಚೇರಿ ವಿರುದ್ಧ 8 ವಿಕೆಟ್ ಗೆಲುವು

ಸೆಮಿಫೈನಲ್: ಛತ್ತೀಸ್ಗಢ ವಿರುದ್ಧ 9 ವಿಕೆಟ್ ಗೆಲುವು

 

ತಮಿಳುನಾಡು ತಂಡದ ಫೈನಲ್ ಹಾದಿ

ಮೊದಲ ಲೀಗ್ ಪಂದ್ಯ: ರಾಜಸ್ಥಾನ ವಿರುದ್ಧ 6 ವಿಕೆಟ್ ಗೆಲುವು

2ನೇ ಲೀಗ್ ಪಂದ್ಯ: ಸರ್ವಿಸಸ್ ವಿರುದ್ಧ 212 ರನ್ ಗೆಲುವು

3ನೇ ಲೀಗ್ ಪಂದ್ಯ: ಬಿಹಾರ್ ವಿರುದ್ಧ 7 ವಿಕೆಟ್ ಗೆಲುವು

4ನೇ ಲೀಗ್ ಪಂದ್ಯ: ಬಂಗಾಳ ವಿರುದ್ಧ 74 ರನ್ ಗೆಲುವು

5ನೇ ಲೀಗ್ ಪಂದ್ಯ: ಜಮ್ಮು-ಕಾಶ್ಮೀರ ವಿರುದ್ಧ 8 ವಿಕೆಟ್ ಗೆಲುವು

6ನೇ ಲೀಗ್ ಪಂದ್ಯ: ತ್ರಿಪುರ ವಿರುದ್ಧ 187 ರನ್ ಗೆಲುವು

7ನೇ ಲೀಗ್ ಪಂದ್ಯ: ರೈಲ್ವೇಸ್ ವಿರುದ್ಧ 8 ವಿಕೆಟ್ ಗೆಲುವು

8ನೇ ಲೀಗ್ ಪಂದ್ಯ: ಮಧ್ಯಪ್ರದೇಶ ವಿರುದ್ಧ 211 ರನ್ ಗೆಲುವು

9ನೇ ಲೀಗ್ ಪಂದ್ಯ: ಗುಜರಾತ್ ವಿರುದ್ಧ 78 ರನ್ ಗೆಲುವು

ಕ್ವಾರ್ಟರ್ ಫೈನಲ್: ಪಂಜಾಬ್ ವಿರುದ್ಧದ ಪಂದ್ಯ ಮಳೆಯಿಂದ ರದ್ದು

ಸೆಮಿಫೈನಲ್: ಗುಜರಾತ್ ವಿರುದ್ಧ ವಿರುದ್ಧ 5 ವಿಕೆಟ್ ಗೆಲುವು

LEAVE A REPLY

Please enter your comment!
Please enter your name here

1 × three =