ವಿಜಯ್ ಹಜಾರೆ ಟ್ರೋಫಿ: ಬ್ಯಾಟಿಂಗ್ ವೈಫಲ್ಯ, ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಆಘಾತ

0
PC: Shreyas Gopal/Facebook

ಬೆಂಗಳೂರು, ಅಕ್ಟೋಬರ್ 1: ಬ್ಯಾಟಿಂಗ್ ವೈಫಲ್ಯಕ್ಕೆ ದೊಡ್ಡ ಬೆಲೆ ತೆತ್ತ ಆತಿಥೇಯ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಹೈದರಾಬಾದ್ ವಿರುದ್ಧ 21 ರನ್ಗಳ ಆಘಾತ ಅನುಭವಿಸಿದೆ.

ಆಲೂರಿನಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಫೀಲ್ಡಿಂಗ್ ಆಯ್ದುಕೊಂಡರು. ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ಹೈದರಾಬಾದ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವುದು ಪಾಂಡೆ ಗೇಮ್ ಪ್ಲಾನ್ ಆಗಿತ್ತು. ಅದಕ್ಕೆ ತಕ್ಕಂತೆ ಬೌಲಿಂಗ್ ಆರಂಭಿಸಿದ ವೇಗಿಗಳಾದ ರೋನಿತ್ ಮೋರೆ ಮತ್ತು ಎಂ.ಪ್ರಸಿದ್ಧ್ ಕೃಷ್ಣ ಹೈದರಾಬಾದ್ಗೆ ಆರಂಭಿಕ ಹೊಡೆತ ಕೊಟ್ಟರು. ಇದರ ಪರಿಣಾಮ ಅಂಬಾಟಿ ರಾಯುಡು ನಾಯಕತ್ವದ ಹೈದರಾಬಾದ್ 48 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು.

ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ನಾಯಕ ರಾಯುಡು ತಂಡಕ್ಕೆ ಆಸರೆಯಾಗಿ ನಿಂತು 111 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿದರು. ರಾಯುಡು ಸಾಹಸದ ಫಲವಾಗಿ ಹೈದರಾಬಾದ್ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಕಲೆ ಹಾಕಿತು.

ಸ್ಪರ್ಧಾತ್ಮಕ ಪಿಚ್ನಲ್ಲಿ 199 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ವೇಗಿ ಮೊಹಮ್ಮದ್ ಸಿರಾಜ್ ಎರಡು ದೊಡ್ಡ ಆಘಾತ ನೀಡಿದರು. ಕಳೆದ ಪಂದ್ಯದಲ್ಲಿ ಕೇರಳ ವಿರುದ್ಧ ಸ್ಫೋಟಕ ಶತಕ ಬಾರಿಸಿದ್ದ ಕೆ.ಎಲ್ ರಾಹುಲ್(4) ಮತ್ತು ಭಾರತ ತಂಡದ ಸೇವೆಯಿಂದ ರಾಜ್ಯ ತಂಡಕ್ಕೆ ಮರಳಿದ ಕರುಣ್ ನಾಯರ್(0) ಮೊದಲ ಓವರ್ನಲ್ಲೇ ಪೆವಿಲಿಯನ್ ಸೇರಿಕೊಂಡರು. ಇನ್ನಿಂಗ್ಸ್ನ ಮೊದಲ ಎಸೆತವನ್ನೇ ಬೌಂಡರಿಗಟ್ಟಿ ಉತ್ತಮ ಆರಂಭಕ ಕಂಡ ರಾಹುಲ್ ನಂತರದ ಎಸೆತದಲ್ಲೇ ಔಟಾದರು.

ರಾಹುಲ್ ಮತ್ತು ಕರುಣ್ ಔಟಾದ ನಂತರ ದೇವದತ್ ಪಡಿಕಲ್ ಮತ್ತು ನಾಯಕ ಮನೀಶ್ ಪಾಂಡೆ ಜೋಡಿ 3ನೇ ವಿಕೆಟ್ಗೆ 85 ರನ್ ಸೇರಿಸಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿತು. ತಂಡದ ಮೊತ್ತ 89 ರನ್ಗಳಾಗಿದ್ದಾಗ 54 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಸ್ ನೆರವಿನಿಂದ 48 ರನ್ ಗಳಿಸಿದ್ದ ಮನೀಶ್ ಪಾಂಡೆ ಔಟಾದರೆ, 5ನೇ ಕ್ರಮಾಂಕದಲ್ಲಿ ಕ್ರೀಸ್ಗಳಿದ ಆಲ್ರೌಂಡರ್ ಶ್ರೇಯಸ್ ಗೋಪಾಲ್(1) ಹೆಚ್ಚು ಹೊತ್ತು ನಿಲ್ಲಲಿಲ್ಲ. ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡದ ನಾಯಕರಾಗಿ ಆಯ್ಕೆಯಾಗಿರುವ ವಿಕೆಟ್ ಕೀಪರ್ ಬಿ.ಆರ್ ಶರತ್(18) ಕೂಡ ತಂಡಕ್ಕೆ ಆಸರೆಯಾದಲಿಲ್ಲ. ಪ್ರವೀಣ್ ದುಬೆ(7) ಮತ್ತು ಕೆ.ಗೌತಮ್(5) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ರಾಜ್ಯ ತಂಡದ ಏಕೈಕ ಆಶಾಕಿರಣವಾಗಿದ್ದದ್ದು ದೇವದತ್ ಪಡಿಕಲ್. ಆದ್ರೆ 60 ರನ್ ಗಳಿಸಿ ಆಡುತ್ತಿದ್ದ ದೇವದತ್ 155ರ ಮೊತ್ತದಲ್ಲಿ ಔಟಾಗುವುದರೊಂದಿಗೆ ತಂಡದ ಜಯದ ಆಸೆ ಕಮರಿತು. ಕೊನೆಯಲ್ಲಿ ವೇಗಿ ಅಭಿಮನ್ಯು ಮಿಥುನ್(20) ತಂಡವನ್ನು ಗೆಲುವಿನ ದಡ ಸೇರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಕರ್ನಾಟಕ ತಂಡ 45.2 ಓವರ್ಗಳಲ್ಲಿ 177 ರನ್ಗಳಿಗೆ ಆಲೌಟಾಯಿತು.

ಹೈದರಾಬಾದ್ ವಿರುದ್ಧ ಸೋಲು ಕಂಡರೂ ಆಡಿರುವ 3 ಪಂದ್ಯಗಳಿಂದ 2 ಗೆಲುವು, ಒಂದು ಸೋಲು ಕಂಡಿರುವ ಕರ್ನಾಟಕ ತಂಡ ಎಲೈಟ್ ಗುಂಪಿನಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಗುರುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ 4ನೇ ಲೀಗ್ ಪಂದ್ಯದಲ್ಲಿ ಮನೀಶ್ ಪಾಂಡೆ ಬಳಗ, ಛತ್ತೀಸ್ಗಢ ತಂಡವನ್ನು ಎದುರಿಸಲಿದೆ.

 

Brief scores

Hyderabad: 198/9 in 50 overs (Ambati Rayudu 87 not out, CV Milind 36; Abhimanyu Mithun 2/34, M Prasidh Krishna 2/35, Ronit More 2/31, Karun Nair 1/17, Shreyas Gopal 1/23, Pravin Dubey 1/18) beat

Karnataka: 177 all out in 45.2 overs (Devdutt Padikkal 60, Manish Pandey 48, Abhimanyu Mithun 20; B Sandeep 4/35, Md Siraj 2/38) by 21 runs.

LEAVE A REPLY

Please enter your comment!
Please enter your name here

1 × five =