ವಿಜಯ್ ಹಜಾರೆ ಟ್ರೋಫಿ: ಭಾನುವಾರ ಚಿನ್ನಸ್ವಾಮಿಯಲ್ಲಿ ಕರ್ನಾಟಕ Vs ವಿನಯ್ ಕುಮಾರ್ ಕದನ

0

ಬೆಂಗಳೂರು, ಅಕ್ಟೋಬರ್ 18: ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ನಾಕೌಟ್ ಹಂತದ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಎಲೈಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ 3 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪುದುಚೇರಿ ತಂಡವನ್ನು ಎದುರಿಸಲಿದೆ.

ಈ ಪಂದ್ಯ ಕರ್ನಾಟಕ Vs ಪುದುಚೇರಿ ಪಂದ್ಯ ಎಂಬುದಕ್ಕಿಂತಲೂ ಕರ್ನಾಟಕ Vs ವಿನಯ್ ಕುಮಾರ್ ನಡುವಿನ ಕದನವೆಂದೇ ಬಿಂಬಿತವಾಗಿದೆ. ಕರ್ನಾಟಕ ತಂಡದ ಮಾಜಿ ನಾಯಕರೂ ಆಗಿರುವ ದಾವಣಗೆರೆ ಎಕ್ಸ್ಪ್ರೆಸ್ ಆರ್.ವಿನಯ್ ಕುಮಾರ್ ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್ನಲ್ಲಿ ಪುದುಚೇರಿ ಪರ ಆಡುತ್ತಿದ್ದಾರೆ. ರಾಜ್ಯ ತಂಡದಲ್ಲಿ ಯುವ ವೇಗದ ಬೌಲರ್ಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿನಯ್ ಪುದುಚೇರಿ ತಂಡಕ್ಕೆ ವಲಸೆ ಹೋಗಿದ್ದಾರೆ.

ಈ ಪಂದ್ಯದ ಮತ್ತೊಂದು ವಿಶೇಷತೆ ಎಂದರೆ ಕರ್ನಾಟಕ ತಂಡದ ಮಾಜಿ ಕೋಚ್ ಜೆ.ಅರುಣ್ ಕುಮಾರ್ ಪುದುಚೇರಿ ತಂಡದ ಕೋಚ್ ಆಗಿದ್ದಾರೆ. 2013-14 ಹಾಗೂ 2014-15ನೇ ಸಾಲಿನಲ್ಲಿ ಕರ್ನಾಟಕ ತಂಡ ಸತತ 2 ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದಾಗ ವಿನಯ್ ಕುಮಾರ್ ತಂಡದ ನಾಯಕ ಹಾಗೂ ಜೆ.ಅರುಣ್ ಕುಮಾರ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದರು. ಇದೀಗ ವಿನಯ್-ಜ್ಯಾಕ್ ಜೋಡಿ ಪುದುಚೇರಿ ತಂಡವನ್ನು ವಿಜಯ್ ಹಜಾರೆ ಕ್ವಾರ್ಟರ್ ಫೈನಲ್ಗೆ ಮುನ್ನಡೆಸಿದ್ದಾರೆ. ಕರ್ನಾಟಕ ತಂಡದ ಐತಿಹಾಸಿಕ ಸಾಧನೆಗೆ ಕಾರಣರಾಗಿದ್ದ ವಿನಯ್-ಜ್ಯಾಕ್ ಜೋಡಿ ಇದೀಗ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕರ್ನಾಟಕ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ.

ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ಅಮೋಘ ಪ್ರದರ್ಶನ ತೋರುತ್ತಿದ್ದು, ಆಡಿರುವ 8 ಲೀಗ್ ಪಂದ್ಯಗಳಲ್ಲಿ 7 ಗೆಲುವು, 1 ಸೋಲು ಸಹಿತ 28 ಅಂಕ ಕಲೆ ಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಭರ್ಜರಿ ಫಾರ್ಮ್ಲ್ಲಿರುವ ನಾಯಕ ಮನೀಶ್ ಪಾಂಡೆ 8 ಪಂದ್ಯಗಳಿಂದ 1 ಶತಕ ಹಾಗೂ 5 ಅರ್ಧಶತಕಗಳ ಸಹಿತ 505 ರನ್ ಗಳಿಸಿದ್ದಾರೆ. 

LEAVE A REPLY

Please enter your comment!
Please enter your name here

thirteen − two =