100ನೇ ರಣಜಿ ಪಂದ್ಯದ ಸಂಭ್ರಮದಲ್ಲಿ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್

0

ಬೆಂಗಳೂರು, ಸೆಪ್ಟೆಂಬರ್ 18: ಗ್ರಾಮೀಣ ಪ್ರದೇಶದಿಂದ ಬಂದು ನಗರ ಕೇಂದ್ರಿತ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಪ್ರತಿಭೆಗಳ ಆಗರವೇ ಆಗಿರುವ ಕರ್ನಾಟಕದ ಪರ 100 ರಣಜಿ ಪಂದ್ಯಗಳನ್ನಾಡುವುದೆಂದರೆ ಅದು ಅತ್ಯಂತ ಉತ್ಕೃಷ್ಠ, ಉನ್ನತ ಸಾಧನೆಯೇ ಸರಿ. ದಾವಣಗೆರೆಯಿಂದ ಬಂದು ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದು ರಾಜ್ಯಕ್ಕೆ ಎರಡು ಬಾರಿ ರಣಜಿ ಟ್ರೋಫಿ ಗೆದ್ದುಕೊಟ್ಟಿರುವ ಆರ್.ವಿನಯ್ ಕುಮಾರ್ ಅಂತಹ ದೊಡ್ಡ ಸಾಧನೆಯ ಹೊಸ್ತಿಲಲ್ಲಿದ್ದಾರೆ.

ಗುರುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ನಂತರ ರಣಜಿ ಟ್ರೋಫಿ ಟೂರ್ನಿ ಆರಂಭವಾಗಲಿದೆ. ನವೆಂಬರ್ 12ರಂದು ಆರಂಭವಾಗಲಿರುವ ಹಾಲಿ ಚಾಂಪಿಯನ್ ವಿದರ್ಭ ವಿರುದ್ಧದ ಪಂದ್ಯ ವಿನಯ್ ಅವರ ಪಾಲಿಗೆ 100ನೇ ರಣಜಿ ಪಂದ್ಯವಾಗಲಿದೆ.

PC: Facebook

ಇದುವರೆಗೆ 99 ರಣಜಿ ಪಂದ್ಯಗಳಿಂದ 383 ವಿಕೆಟ್ಸ್ ಪಡೆದಿರುವ 34 ವರ್ಷದ ವಿನಯ್ ಕುಮಾರ್, ರಣಜಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ಸ್ ಗಳಿಸಿರುವ ವೇಗದ ಬೌಲರ್‌ಗಳ ಸಾಲಿನಲ್ಲಿ ಮೊದಲ ಸಾಲಿನಲ್ಲಿದ್ದಾರೆ.
100ನೇ ರಣಜಿ ಪಂದ್ಯದ ಹಿನ್ನೆಲೆಯಲ್ಲಿ ವಿನಯ್ ಕುಮಾರ್ ಅವರೊಂದಿಗಿನ ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ.

Q: ಈ ಬಾರಿಯ ರಣಜಿ ಟ್ರೋಫಿ ಟೂರ್ನಿ ನಿಮ್ಮ ಪಾಲಿಗೆ ಸ್ಮರಣೀಯ. ಏಕೆಂದರ ನೀವು ವೃತ್ತಿಜೀವನದ 100ನೇ ರಣಜಿ ಪಂದ್ಯವನ್ನಾಡಲಿದ್ದೀರಿ. ಆ ಪಂದ್ಯವನ್ನು ಹೇಗೆ ಎದುರು ನೋಡುತ್ತಿದ್ದೀರಿ?
Vinay: ಇದೊಂದು ಅದ್ಭುತ ಅನುಭವ. ತವರು ರಾಜ್ಯದ ಪರ 100 ರಣಜಿ ಪಂದ್ಯಗಳನ್ನಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ದೇವರು ದೊಡ್ಡವನು. ನನಗೆ ಇಷ್ಟೆಲ್ಲಾ ಅವಕಾಶ ಕಲ್ಪಿಸಿದ್ದಾನೆ. ಮೊದಲ ಬಾರಿ ಬೆಂಗಳೂರಿಗೆ ಬಂದಾಗ ಇಷ್ಟೆಲ್ಲಾ ಸಾಧನೆಗಳನ್ನು ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನ್ನ ಕುಟುಂಬ, ತಂದೆ-ತಾಯಿ, ಪತ್ನಿ, ಸ್ನೇಹಿತರು, ಹಿತೈಷಿಗಳು, ಹಿರಿಯ ಕ್ರಿಕೆಟಿಗರು, ಕೆಎಸ್‌ಸಿಎಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಏಕೆಂದರೆ ಗ್ರಾಮೀಣ ಪ್ರದೇಶದಿಂದ ಬಂದು 100 ರಣಜಿ ಪಂದ್ಯಗಳನ್ನಾಡಬೇಕೆಂದರೆ ಅದು ಸುಲಭದ ಹಾದಿಯಲ್ಲ. ಇವರೆಲ್ಲರ ಸಹಕಾರದಿಂದ ಅದು ಸಾಧ್ಯವಾಗುತ್ತಿದೆ. ನನ್ನ 100ನೇ ರಣಜಿ ಪಂದ್ಯವನ್ನು ರಾಜ್ಯಕ್ಕಾಗಿ ಗೆದ್ದುಕೊಡಲು ಬಯಸುತ್ತೇನೆ.

Q: ರಣಜಿ ಟ್ರೋಫಿಯಲ್ಲಿ ನಿಮ್ಮ ಮರೆಯಲಾಗದ ಕ್ಷಣಗಳು?
Vinay: ಮೊದಲ ಬಾರಿ 2013-14ರಲ್ಲಿ ರಣಜಿ ಟ್ರೋಫಿ ಗೆದ್ದದ್ದು ನನ್ನ ರಣಜಿ ವೃತ್ತಿಜೀವನದ ಅತ್ಯಂತ ಶ್ರೇಷ್ಠ ಕ್ಷಣ. ಅಲ್ಲದೆ 2014-15ನೇ ಸಾಲಿನಲ್ಲಿ ನಾವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ತಂಡವನ್ನು ಸೋಲಿಸಿದ್ದು ಮತ್ತೊಂದು ಮರೆಯಲಾಗದ ಕ್ಷಣ. ನಾವು 187 ರನ್‌ಗಳಿಗೆ ಆಲೌಟಾಗಿ ಅವರನ್ನು 46 ರನ್‌ಗಳಿಗೆ ಆಲೌಟ್ ಮಾಡಿದ್ದೆವು. ನಾನು ಆ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದಿದ್ದೆ.

 

Q: ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ಸ್ ಪಡೆದಿರುವ ವೇಗದ ಬೌಲರ್‌ಗಳ ಸಾಲಿನಲ್ಲಿ ನೀವು ನಂ.1. ಈ ಗೌರವದ ಬಗ್ಗೆ?
Vinay: ನನಗೆ ಪ್ರತಿ ದಿನದ ಪ್ರಕ್ರಿಯೆ ಮುಖ್ಯ. ಉತ್ತಮವಾಗಿ ಬೌಲಿಂಗ್ ಮಾಡಿ ತಂಡಕ್ಕಾಗಿ ವಿಕೆಟ್ ಗಳಿಸಿಕೊಡಲು ಸದಾ ಪ್ರಯತ್ನಿಸುತ್ತಿರುತ್ತೇನೆ. ಆ ಪ್ರಕ್ರಿಯೆಯಲ್ಲಿ ಏನೆಲ್ಲಾ ಸಾಧನೆ ಮಾಡಿದ್ದೇನೋ, ಅದು ಪ್ರಯತ್ನಕ್ಕೆ ಸಂದ ಫಲ. ಇವತ್ತು ಆ ಸ್ಥಾನದಲ್ಲಿ ನಾನಿರಬಹುದು. ನಾಳೆ ಇನ್ಯಾರೋ ಬಂದು ಆ ಸ್ಥಾನದಲ್ಲಿ ಕುಳಿತುಕೊಳ್ಳಬಹುದು. ಆದರೆ ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಿಸುವುದು ನನಗೆ ಮುಖ್ಯ. ತಂಡಕ್ಕೆ ಅತ್ಯಂತ ಮುಖ್ಯವಾಗಿದ್ದಾಗ ಮಹತ್ವದ ಘಟ್ಟಗಳಲ್ಲಿ ಪಡೆಯುವ 2-3 ವಿಕೆಟ್‌ಗಳು 5-6 ವಿಕೆಟ್‌ಗಳನ್ನು ಪಡೆಯುವುದಕ್ಕಿಂತ ಹೆಚ್ಚಿನ ಖುಷಿ ನೀಡುತ್ತದೆ.

Q: 2004-05ರಲ್ಲಿ ಮೊದಲ ಬಾರಿ ಕರ್ನಾಟಕ ತಂಡದ ಡ್ರೆಸ್ಸಿಂಗ್ ರೂಮ್‌ಗೆ ಕಾಲಿಟ್ಟ ಕ್ಷಣವನ್ನು ನೆನಪು ಮಾಡಿಕೊಳ್ಳುವುದಾದರೆ…
Vinay: 2004-05ರಲ್ಲಿ ಕೋಲ್ಕೊತಾದ ಜಾಧವ್‌ಪುರ ಯೂನಿವರ್ಸಿಟಿ ಮೈದಾನದಲ್ಲಿ ಬಂಗಾಳದ ವಿರುದ್ಧದ ಪಂದ್ಯದೊಂದಿಗೆ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದೆ. ಆಗ ಜೆ.ಅರುಣ್ ಕುಮಾರ್ ನಾಯಕ, ಕೆ.ಜಸ್ವಂತ್ ಕೋಚ್. ದೊಡ್ಡ ಗಣೇಶ್ ಮತ್ತು ಎನ್.ಸಿ ಅಯ್ಯಪ್ಪ, ಸುನಿಲ್ ಜೋಶಿ ನನ್ನ ಬೌಲಿಂಗ್ ಜೊತೆಗಾರರಾಗಿದ್ದರು. ಅವರೆಲ್ಲರ ಸಹಕಾರ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಇಲ್ಲವಾದಲ್ಲಿ ಗ್ರಾಮೀಣ ಪ್ರದೇಶದಿಂದ ಬಂದು ಇಷ್ಟರ ಮಟ್ಟಿಗೆ ಸಾಧನೆ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನನ್ನ 2ನೇ ರಣಜಿ ಪಂದ್ಯವಾಡಿದಾಗ ಗುಜರಾತ್ ವಿರುದ್ಧ 5 ವಿಕೆಟ್‌ಗಳನ್ನು ಪಡೆದೆ. ನನ್ನ ಆಟವನ್ನು ಆಡಲು ಹಿರಿಯರು ನನಗೆ ಸ್ವಾತಂತ್ರ್ಯ ನೀಡಿದ್ದರು. ಅದರಿಂದಾಗಿಯೇ ಇಂದು ಇಲ್ಲಿ ನಿಂತಿದ್ದೇನೆ.

Q: ಗ್ರಾಮೀಣ ಪ್ರದೇಶದಿಂದ ಬಂದು ರಾಜ್ಯಕ್ಕೆ ಎರಡು ರಣಜಿ ಟ್ರೋಫಿಗಳನ್ನು ಗೆದ್ದುಕೊಟ್ಟಿರುವುದು ನಿಜಕ್ಕೂ ಅದ್ಭುತ ಸಾಧನೆ. ಈ ಪಯಣ ಹೇಗೆ ಸಾಧ್ಯವಾಯಿತು?
Vinay: ಈ ಸುಂದರ ಪಯಣವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮೊದಲ ಬಾರಿ ಬೆಂಗಳೂರಿಗೆ ಬಂದಾಗ ನೆಫ್ಚ್ಯೂನ್ ಕ್ರಿಕೆಟರ್ಸ್ ತಂಡಕ್ಕೆ ಆಡಿದೆ. ಅಲ್ಲಿ ಸಿದ್ದರಾಮು ಸರ್, ರಾಜೇಶ್ ಕಾಮತ್ ಅವರೊಂದಿಗೆ ಆಡುವ ಅವಕಾಶ ಸಿಕ್ಕಿತು. ಅವರ ಮಾರ್ಗದರ್ಶನದಲ್ಲಿ ಆ ವರ್ಷ ಚಾಂಪಿಯನ್ಸ್ ಆದೆವು. ಅಲ್ಲದೆ 5ನೇ ಡಿವಿಜನ್‌ನಿಂದ ತಂಡ 4ನೇ ಡಿವಿಜನ್‌ಗೆ ಬಡ್ತಿಯನ್ನೂ ಪಡೆಯಿತು. ಮುಂದಿನ ವರ್ಷವೇ ಸ್ವಸ್ತಿಕ್ ಯೂನಿಯನ್ ಪರ ಫಸ್ಟ್ ಡಿವಿಜನ್ ಆಡುವ ಅವಕಾಶ ಸಿಕ್ಕಿತು. ಬ್ರಿಜೇಶ್ ಪಟೇಲ್ ಸರ್ ಮತ್ತು ವೈ.ಬಿ ಪಟೇಲ್ ಸರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವೈ.ಬಿ ಪಟೇಲ್ ಸರ್ ನನ್ನ ಪಾಲಿಗೆ ಸದಾ ಬೆಂಬಲವಾಗಿ ನಿಂತಿದ್ದರು. ‘ಹೋಗು ಕ್ರಿಕೆಟ್ ಆಡು, ಬೆಂಗಳೂರಿನಲ್ಲಿ ಬೇರೆ ಯಾವ ವಿಚಾರದಲ್ಲೂ ನಿನ್ನನ್ನು ತೊಡಗಿಸಿಕೊಳ್ಳಬೇಡ. ಕ್ರಿಕೆಟ್ ಆಡುವುದಷ್ಟೇ ನಿನ್ನ ಕೆಲಸ’ ಎಂದು ವೈ.ಬಿ ಪಟೇಲ್ ಯಾವಾಗಲೂ ಹೇಳುತ್ತಿದ್ದರು. ಆಗ ವೈ.ಬಿ ಪಟೇಲ್ ಸರ್ ಮತ್ತು ಸಿದ್ದರಾಮು ಸರ್ ತುಮಕೂರು ವಲಯದ ಆಯ್ಕೆಗಾರರಾಗಿದ್ದರು. ಅವರು ನನ್ನ ಪ್ರತಿಭೆಯನ್ನು ಗುರುತಿಸಿ ಆಡುವ ಅವಕಾಶಗಳನ್ನು ಕಲ್ಪಿಸಿದರು. ಅಲ್ಲಿಂದ ಪ್ರಯತ್ನಗಳನ್ನು ಮುಂದುವರಿಸುತ್ತಾ ಬಂದೆ. ನಂತರ ಎಂಆರ್‌ಎಫ್‌ ಫೌಂಡೇಶನ್ ತಂಡದ ಪರ ಅನಿಲ್ ಕುಂಬ್ಳೆ ಅವರ ನಾಯಕತ್ವದಲ್ಲಿ ಆಡುವ ಅವಕಾಶ ನನ್ನದಾಯಿತು. ಕನಕಪುರ ರಸ್ತೆಯಲ್ಲಿರುವ ಜೈನ್ ರೆಸಿಡೆನ್ಶಿಯಲ್ ಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ ರೈಲ್ವೇ ಪ್ರಮೋಷನ್ ಬೋರ್ಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್‌ಗಳನ್ನು ಪಡೆದೆ. ಆರ್‌ಡಬ್ಲ್ಯುಎಫ್‌ ಮೈದಾನದಲ್ಲಿ ನಡೆದ ಮುಂದಿನ ಪಂದ್ಯದಲ್ಲಿ ಐಒಸಿಎಲ್ ವಿರುದ್ಧ 4 ವಿಕೆಟ್ಸ್ ಗಳಿಸಿದೆ. ಹೀಗೆ ನನ್ನಲ್ಲಿ ನನಗೆ ಆತ್ಮವಿಶ್ವಾಸ ಮೂಡಲಾರಂಭಿಸಿತು. ರಣಜಿ ಟ್ರೋಫಿ ತಂಡಕ್ಕೆ ಆಯ್ಕೆಯಾದ ನಂತರ ನನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟ ಕೆಎಸ್‌ಸಿಎ, ನಾಯಕ ಜ್ಯಾಕ್, ಕೋಚ್ ಜಸ್ವಂತ್ ಮೊದಲ ಪಂದ್ಯದಲ್ಲೇ ಆಡಿಸಿದರು. ಬೆಂಗಳೂರಿಗೆ ಬಂದಾಗ ವಿಜಯಾ ಬ್ಯಾಂಕ್ ಉದ್ಯೋಗ ಭದ್ರತೆಯನ್ನು ನೀಡಿತು. ಅದು ನಿರಾತಂಕವಾಗಿ ಕ್ರಿಕೆಟ್ ಆಡಲು ನೆರವಾಯಿತು.

Q: ಹೊಸ ದೇಶೀಯ ಕ್ರಿಕೆಟ್ ಋತು ಆರಂಭವಾಗುತ್ತಿದೆ. ಕರ್ನಾಟಕ ತಂಡದ ಸಿದ್ಧತೆ ಹೇಗಿದೆ?
Vinay: ಸಿದ್ಧತೆ ಚೆನ್ನಾಗಿದೆ. ಹೆಚ್ಚಿನ ಆಟಗಾರರು ಈಗಷ್ಟೇ ಕೆಪಿಎಲ್ ಟೂರ್ನಿ ಆಡಿ ಬಂದಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಾದರೂ, ಕೆಪಿಎಲ್ ಮೂಲಕ ಎಲ್ಲರಿಗೂ ಮ್ಯಾಚ್ ಪ್ರಾಕ್ಟೀಸ್ ಸಿಕ್ಕಿದೆ. ಸೋಮವಾರ ನಾವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯವಾಡಿದ್ದೇವೆ. ಎಲ್ಲರೂ ಕ್ರಿಕೆಟ್ ಆಡುತ್ತಿರುವುದರಿಂದ ಸಿದ್ಧತೆ ಚೆನ್ನಾಗಿದೆ.

Q: ಈ ಬಾರಿ ವೈಯಕ್ತಿಕ ಗುರಿ ಏನಾದರೂ ಇಟ್ಟುಕೊಂಡಿದ್ದೀರಾ?
Vinay: ನಾನು ಮತ್ತೆ ಭಾರತ ತಂಡದ ಪರ ಆಡಲೇಬೇಕು. ಅದನ್ನು ಯಾವತ್ತೂ ತಲೆಯಿಂದ ತೆಗೆಯಲು ಸಾಧ್ಯವೇ ಇಲ್ಲ. ಇನ್ನೂ ಫಿಟ್ ಆಗಿದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡುತ್ತಿದೆ. ಉತ್ತಮವಾಗಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಿದ್ದೇನೆ. ನಾಯಕನಾಗಿ ಪ್ರತಿ ಪಂದ್ಯವನ್ನೂ ತಂಡಕ್ಕಾಗಿ ಗೆದ್ದುಕೊಡಲು ಬಯಸುತ್ತೇನೆ. ಕಳೆದ ಕೆಲ ವರ್ಷಗಳಿಂದ ಉತ್ತಮ ಆಟವಾಡುತ್ತಿದ್ದೇನೆ. ಆದರೆ ಭಾರತ ತಂಡದಲ್ಲಿ ಏಕೆ ಅವಕಾಶ ಸಿಗುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ತಾಳ್ಮೆಯಿಂದ ಕಾಯುತ್ತೇನೆ. ನಾನೇನು ಮಾಡುತ್ತಿದ್ದೇನೋ ಅದನ್ನು ಮುಂದುವರಿಸುತ್ತೇನೆ.

Q: ಕಳೆದ 3-4 ವರ್ಷಗಳಿಂದ ನಿಮ್ಮ ಫಿಟ್‌ನೆಸ್ ಹಿಂದೆಂದಿಗಿಂತಲೂ ಉತ್ತಮವಾಗಿದೆ. ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತೀರಿ. ಮೈದಾನದಲ್ಲಿ ಶೇಕಡ 100ರಷ್ಟು ಪ್ರಯತ್ನ ಹಾಕಿ ಸಹ ಆಟಗಾರರಿಗೆ ಮಾದರಿಯಾಗುತ್ತೀರಿ. ಇದಕ್ಕೆಲ್ಲಾ ಪ್ರೇರಣೆ ಎಲ್ಲಿಂದ ಬರುತ್ತದೆ?
Vinay: ಕ್ರಿಕೆಟ್ ಅನ್ನು ಪ್ರೀತಿಯಿಂದ ಆಡುತ್ತೇನೆ. ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದೇನೆ. ನೀವು ಹೇಳಿದ್ದು ನಿಜ. ಒಮ್ಮೆ ನೀವು ಪ್ರಬುದ್ಧರಾದರೆ ನಿಮ್ಮ ದೇಹಕ್ಕೆ ಯಾವ ರೀತಿಯ ಟ್ರೈನಿಂಗ್ ಬೇಕು ಎಂಬುದು ನಿಮಗೆ ತಿಳಿಯುತ್ತದೆ. ದೇಹವನ್ನು ಯಾವ ರೀತಿ ಫಿಟ್ ಇಟ್ಟುಕೊಂಡರೆ, ಯಾವ ರೀತಿಯ ಟ್ರೈನಿಂಗ್ ಮಾಡಿದರೆ ಮೈದಾನದಲ್ಲಿ ಶೇಕಡ 100ರಷ್ಟು ಪ್ರಯತ್ನ ಹಾಕಬಹುದು ಎಂಬುದನ್ನು ಅರಿತುಕೊಂಡಿದ್ದೇನೆ. ಸರಿಯಾದ ರೀತಿಯಲ್ಲಿ ಟ್ರೈನಿಂಗ್ ಮಾಡುತ್ತಿದ್ದೇನೆ. ಅದಕ್ಕೆ ಪೂರಕವಾದ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದೇನೆ. ಇದೆಲ್ಲಾ ಅನುಭವ, ಪ್ರಬುದ್ಧತೆಯಿಂದ ಸಾಧ್ಯವಾಗಿದೆ.

Q: ಈ ಋತುವಿನಲ್ಲಿ ಕರ್ನಾಟಕ ತಂಡಕ್ಕೆ ಹಲವಾರು ಆಟಗಾರರು ಅಲಭ್ಯರಾಗುವ ಸಾಧ್ಯತೆಯಿದೆ. ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಬರುತ್ತಿದೆ. ಭಾರತ ‘ಎ’ ತಂಡ ನ್ಯೂಜಿಲೆಂಡ್‌ಗೆ ಹೋಗುತ್ತಿದೆ. ನಂತರ ಆಸ್ಟ್ರೇಲಿಯಾ ಪ್ರವಾಸವಿದೆ. ಹೀಗಾಗಿ ಮಯಾಂಕ್ ಅಗರ್ವಾಲ್, ಸಮರ್ಥ್, ಮನೀಶ್ ಪಾಂಡೆ, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಪ್ರಸಿದ್ಧ್ ಕೃಷ್ಣ ಇಡೀ ಋತುವಿಗೆ ಕರ್ನಾಟಕ ತಂಡಕ್ಕೆ ಲಭ್ಯರಿರುವುದು ಕಷ್ಟ. ಕರ್ನಾಟಕದಲ್ಲಿ ಮೀಸಲು ವೇಗದ ಬೌಲರ್‌ಗಳು ಹಾಗೂ ಸ್ಪಿನ್ನರ್‌ಗಳಿದ್ದಾರೆ. ಆದರೆ ಬ್ಯಾಟ್ಸ್‌ಮನ್‌ಗಳ ಸ್ಥಾನಗಳನ್ನು ತುಂಬುವ ಸಮರ್ಥರ ಕೊರತೆ ಕಂಡು ಬರುತ್ತಿದೆ…
Vinay: ನಮ್ಮಲ್ಲಿ ಕೆಲ ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅಂತಿಮ 15ರ ತಂಡದಲ್ಲಿ ಅವಕಾಶ ಪಡೆಯದವರು ಕಾಯುತ್ತಿದ್ದಾರೆ. ಕೌನೇನ್ ಅಬ್ಬಾಸ್, ಕೆ.ಎನ್ ಭರತ್, ಕೆ.ವಿ ಸಿದ್ಧಾರ್ಥ್ ಉತ್ತಮವಾಗಿ ಆಡುತ್ತಿದ್ದಾರೆ. ನಮ್ಮ ಈಗಿನ ತಂಡದಲ್ಲಿರುವವರು ಭಾರತ, ಭಾರತ ‘ಎ’ ತಂಡಗಳ ಪರ ಆಡಲು ಹೋದರೆ, ಇವರಿಗೆಲ್ಲಾ ಇದು ಉತ್ತಮ ಅವಕಾಶ. ಏಕೆಂದರೆ ಈಗಿನ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದು ಆಡುವ ಹನ್ನೊಂದರ ಬಳಗದಲ್ಲಿ ಆಡುವುದು ತುಂಬಾ ಕಷ್ಟದ ಮಾತು. ತಂಡ ಅಷ್ಟರ ಮಟ್ಟಿಗೆ ಬಲಿಷ್ಠವಾಗಿದೆ. ಆದರೆ ಹೊಸದಾಗಿ ಬರುವವರಿಗೆ ಅವಕಾಶವಂತೂ ಇದ್ದೇ ಇದೆ. ಅವರೂ ಕೂಡ ಚೆನ್ನಾಗಿ ಆಡಿದರೆ ಭಾರತ ತಂಡದ ಪರ ಆಡುವ ಸಾಧ್ಯತೆಯೂ ಇರುತ್ತದೆ.

PC: Mayank Agarwal/Twitter

Q: ನಿಮ್ಮ ನಾಯಕತ್ವದಲ್ಲಿ ಮಯಾಂಕ್ ಅಗರ್ವಾಲ್ ಕಳೆದ ಋತುವಿನಲ್ಲಿ ಅಮೋಘ ಪ್ರದರ್ಶನ ತೋರಿದ್ದರು. 10 ತಿಂಗಳಲ್ಲಿ 3 ಸಾವಿರಕ್ಕೂ ಹೆಚ್ಚು ರನ್, 13 ಶತಕಗಳನ್ನು ಬಾರಿಸಿದ್ದಾರೆ. ಆದರೆ ಭಾರತ ತಂಡದ ಪರ ಆಡುವ ಅವಕಾಶ ಸಿಗುತ್ತಿಲ್ಲ. ಅವರನ್ನು ಹತ್ತಿರದಿಂದ ಕಂಡ ನಾಯಕನಾಗಿ ಈ ಬಗ್ಗೆ ನಿಮ್ಮ ಅಭಿಪ್ರಾಯ?
Vinay: ಆಯ್ಕೆಗಾರರು ಯಾವ ರೀತಿ ಯೋಚಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ನನ್ನ ಪ್ರಕಾರ ಅವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಅವರು ತಾಳ್ಮೆಯಿಂದ ಕಾಯಬೇಕಷ್ಟೇ. ಸಾಕಷ್ಟು ರನ್ ಗಳಿಸಿದ್ದರೂ, ಸಾಕಷ್ಟು ವಿಕೆಟ್ ಪಡೆದಿದ್ದರೂ ಅವಕಾಶ ಸಿಗುತ್ತಿಲ್ಲ ಎಂಬುದನ್ನು ಹೇಳುವುದು ತುಂಬಾ ಸುಲಭ. ಆದರೆ ಅದರಿಂದ ನಿಮ್ಮ ಮೇಲೆ ನೀವೇ ಅನಗತ್ಯ ಒತ್ತಡ ಹಾಕಿಕೊಂಡಂತಾಗುತ್ತದೆ. ಆಟದತ್ತ ಗಮನ ಹರಿಸಬೇಕು. ಪ್ರಯತ್ನ ಪಡುತ್ತಲೇ ಇರಬೇಕು. ಮಯಾಂಕ್‌ಗೆ ಅವಕಾಶವಂತೂ ಖಂಡಿತಾ ಸಿಕ್ಕೇ ಸಿಗುತ್ತದೆ.

 

 

ಆರ್.ವಿನಯ್ ಕುಮಾರ್ ಅವರ ರಣಜಿ ವೃತ್ತಿಜೀವನದ ಹೈಲೈಟ್ಸ್
01 ರಣಜ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್‌ಗಳ ಸಾಲಿನಲ್ಲಿ ವಿನಯ್ ಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ.

01 ರಣಜಿ ಟ್ರೋಫಿ, ಇರಾನಿ ಕಪ್, ವಿಜಯ್ ಹಜಾರೆ ಟ್ರೋಫಿಗಳನ್ನು ಸತತ ಎರಡು ಬಾರಿ (2013/14 ಮತ್ತು 2014/15) ಗೆದ್ದ ದೇಶದ ಏಕೈಕ ನಾಯಕ ಆರ್.ವಿನಯ್ ಕುಮಾರ್.

02 ಕರ್ನಾಟಕಕ್ಕೆ ಸತತ ಎರಡು ಬಾರಿ ರಣಜಿ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ.

02 ರಣಜಿ ಟ್ರೋಫಿಯಲ್ಲಿ ವಿನಯ್ ಕುಮಾರ್ 2 ಬಾರಿ ಹ್ಯಾಟ್ರಿಕ್ ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. (2007/08: ಮಹಾರಾಷ್ಟ್ರ ವಿರುದ್ಧ ರತ್ನಗಿರಿಯಲ್ಲಿ & 2017/18: ಮುಂಬೈ ವಿರುದ್ಧ ನಾಗ್ಪುರದಲ್ಲಿ).

02 ರಣಜಿ ಟ್ರೋಫಿಯಲ್ಲಿ ವಿನಯ್ ಕುಮಾರ್ 2 ಶತಕಗಳನ್ನು ಗಳಿಸಿದ್ದಾರೆ. (105* ಪಂಜಾಬ್ ವಿರುದ್ಧ ಹುಬ್ಬಳ್ಳಿಯಲ್ಲಿ 2013/14, & 105* ತಮಿಳುನಾಡು ವಿರುದ್ಧ ಮುಂಬೈನಲ್ಲಿ 2014/15).

20  ರಣಜಿ ಟ್ರೋಫಿ ಟೂರ್ನಿಗಳಲ್ಲಿ 20 ಬಾರಿ ಬಾರಿ ಇನ್ನಿಂಗ್ಸ್ ಒಂದರಲ್ಲಿ ವಿನಯ್ ಕುಮಾರ್ 5 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

383 99 ರಣಜಿ ಪಂದ್ಯಗಳಿಂದ ವಿನಯ್ ಕುಮಾರ್ ಪಡೆದಿರುವ ಒಟ್ಟು ವಿಕೆಟ್ಸ್‌

201 ನಾಯಕತ್ವದ ವಹಿಸಿರುವ 55 ರಣಜಿ ಪಂದ್ಯಗಳಿಂದ ವಿನಯ್ ಕುಮಾರ್ ಪಡೆದಿರುವ ಒಟ್ಟು ವಿಕೆಟ್‌ಗಳು

 

ರಣಜಿ ಟ್ರೋಫಿ : ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳು
637: ರಾಜಿಂದರ್ ಗೋಯೆಲ್ (ಹರ್ಯಾಣ, ಸ್ಪಿನ್ನರ್)
530: ಎಸ್.ವೆಂಕಟರಾಘವನ್ (ತಮಿಳುನಾಡು, ಸ್ಪಿನ್ನರ್)
479: ಸುನಿಲ್ ಜೋಶಿ (ಕರ್ನಾಟಕ, ಸ್ಪಿನ್ನರ್)
442: ನರೇಂದ್ರ ಹಿರ್ವಾನಿ (ಮಧ್ಯಪ್ರದೇಶ, ಸ್ಪಿನ್ನರ್)
437: ಬಿ.ಎಸ್ ಚಂದ್ರಶೇಖರ್ (ಕರ್ನಾಟಕ, ಸ್ಪಿನ್ನರ್)
418: ವಾಮನ್ ಕುಮಾರ್ (ತಮಿಳುನಾಡು, ಸ್ಪಿನ್ನರ್)
405: ಸಾಯಿರಾಜ್ ಬಹುತುಲೆ (ಮುಂಬೈ, ಸ್ಪಿನ್ನರ್)
403: ಬಿಷನ್ ಸಿಂಗ್ ಬೇಡಿ (ದಿಲ್ಲಿ, ಸ್ಪಿನ್ನರ್)
401: ಉತ್ಪಲ್ ಚಟರ್ಜಿ (ಬಂಗಾಳ, ಸ್ಪಿನ್ನರ್)
383: ಆರ್.ವಿನಯ್ ಕುಮಾರ್ (ಕರ್ನಾಟಕ, ವೇಗದ ಬೌಲರ್)
370: ಎರಾಪಳ್ಳಿ ಪ್ರಸನ್ನ (ಕರ್ನಾಟಕ, ಸ್ಪಿನ್ನರ್)

ರಣಜಿ ಟ್ರೋಫಿ: ಕರ್ನಾಟಕ ಪರ ಅತಿ ಹೆಚ್ಚು ವಿಕೆಟ್ಸ್
ಆಟಗಾರ                ವಿಕೆಟ್ಸ್   ಪಂದ್ಯ
ಸುನಿಲ್ ಜೋಶಿ         479    117
ಬಿ.ಎಸ್ ಚಂದ್ರಶೇಖರ್  437    76
ಆರ್.ವಿನಯ್ ಕುಮಾರ್ 383    99
ಎರಾಪಳ್ಳಿ ಪ್ರಸನ್ನ       370    71

ರಣಜಿ ಟ್ರೋಫಿ: ಇನ್ನಿಂಗ್ಸ್ ಒಂದರಲ್ಲಿ 5 ಅಥವಾ 5+ ವಿಕೆಟ್‌ಗಳ ಸಾಧನೆ
ವಿಕೆಟ್ಸ್        ವಿರುದ್ಧ             ಸ್ಥಳ          ವರ್ಷ
5-83      ಗುಜರಾತ್       ಬೆಂಗಳೂರು   2004/05
5-65      ರೈಲ್ವೇಸ್            ದಿಲ್ಲಿ       2005/06
5-22    ಮಹಾರಾಷ್ಟ್ರ     ಬೆಂಗಳೂರು     2005/06
5-47   ಉತ್ತರ ಪ್ರದೇಶ    ಕಾನ್ಪುರ        2006/07
5-70     ಸೌರಾಷ್ಟ್ರ          ಮೈಸೂರು    2007/08
5-121     ದಿಲ್ಲಿ           ಬೆಂಗಳೂರು     2007/08
6-38    ಮಹಾರಾಷ್ಟ್ರ       ರತ್ನಗಿರಿ        2007/08
8-32      ದಿಲ್ಲಿ                 ದಿಲ್ಲಿ        2009/10
5-40    ಮಹಾರಾಷ್ಟ್ರ         ಪುಣೆ         2009/10
5-61    ಪಂಜಾಬ್         ಮೊಹಾಲಿ       2010/11
7-58    ಒಡಿಶಾ          ಬೆಂಗಳೂರು     2012/13
5-27    ಪಂಜಾಬ್         ಮೊಹಾಲಿ       2013/14
6-34    ಬಂಗಾಳ         ಕೋಲ್ಕತಾ      2014/15
6-20    ಮುಂಬೈ         ಬೆಂಗಳೂರು     2014/15
5-34   ತಮಿಳುನಾಡು      ಮುಂಬೈ       2014/15
5-28    ವಿದರ್ಭ          ವಡೋದರ      2016/17
5-54   ರಾಜಸ್ಥಾನ      ವಿಜಯನಗರಂ    2016/17
5-46   ಮಹಾರಾಷ್ಟ್ರ       ಮೊಹಾಲಿ       2016/17
6-59   ಮಹಾರಾಷ್ಟ್ರ         ಪುಣೆ         2016/17
6-34   ಮುಂಬೈ           ನಾಗ್ಪುರ       2017/18

ರಣಜಿ ಟ್ರೋಫಿ: ಕರ್ನಾಟಕದ ಯಶಸ್ವಿ ನಾಯಕರು
      ನಾಯಕ           ಪಂದ್ಯ ಗೆಲುವು ಸೋಲು ಡ್ರಾ
ಆರ್.ವಿನಯ್ ಕುಮಾರ್ 55     25    06    24
ಎರಾಪಳ್ಳಿ ಪ್ರಸನ್ನ       37     18    04    15
ವಿ.ಸುಬ್ರಮಣ್ಯ          27     17    06    04
ಅನಿಲ್ ಕುಂಬ್ಳೆ          16     12    00    04
ಜೆ.ಅರುಣ್ ಕುಮಾರ್   19     11    03    05
ರೋಜರ್ ಬಿನ್ನಿ         26     11    01    14

 

ರಣಜಿ ಟ್ರೋಫಿ: ವಿನಯ್ ಕುಮಾರ್ ಅವರ ನಾಯಕತ್ವದ ದಾಖಲೆ
    ವರ್ಷ        ಪಂದ್ಯ  ಗೆಲುವು  ಸೋಲು  ಡ್ರಾ
2010/11    06     02     01     03
2011/12    03     01     00     02
2012/13    05     01     01     03
2013/14    08      05     00     03
2014/15    10      06     00     04
2015/16    08      02     01     05
2016/17    07      03     02     02
2017/18    08      05     01     02
ಒಟ್ಟು             55     25    06    24

ಅಂಕಿ ಅಂಶ ನೆರವು: ಚನ್ನಗಿರಿ ಕೇಶವಮೂರ್ತಿ, ಅಂಕಿ ಅಂಶ ತಜ್ಞರು

LEAVE A REPLY

Please enter your comment!
Please enter your name here

8 − two =